ಲಿಂಗಸುಗೂರು (ರಾಯಚೂರು):ಕೃಷ್ಣಾ ಪ್ರವಾಹದಿಂದ ಕರಕಲಗಡ್ಡಿ ನಡುಗಡ್ಡೆಯಲ್ಲಿ ಬದುಕು ಕಟ್ಟಿಕೊಂಡಿದ್ದ ನಮ್ಮನ್ನು ಒತ್ತಾಯದಿಂದ ಕರೆತಂದು ಕೊಲೆ ಮಾಡಿದ ಆರೋಪಿತರಿಗೆ ಕಾವಲು ಹಾಕಿದಂತೆ ಹಾಕಿದ್ದು ಇದು ನ್ಯಾಯವೇ ಎಂದು ಸಂತ್ರಸ್ತ ಕುಟುಂಬಸ್ಥರು ಪಿಎಸ್ಐ ಪ್ರಕಾಶರೆಡ್ಡಿ ಡಂಬಳಗೆ ಬಳಿ ಪ್ರಶ್ನಿಸಿದ್ದಾರೆ.
ಕಾಳಜಿ ಕೇಂದ್ರದಲ್ಲಿ ಎಲ್ಲಾ ಸೌಲಭ್ಯ ನೀಡುವುದಾಗಿ ಹೇಳಿದ ಅಧಿಕಾರಿಗಳು ನಮ್ಮತ್ತ ಸುಳಿದಿಲ್ಲ. ಪೊಲೀಸ್ ಸಿಬ್ಬಂದಿ ಹೊರಗಡೆ ಔಷಧಿ, ಅಗತ್ಯ ವಸ್ತು ತರಲು ಬಿಡುತ್ತಿಲ್ಲ ಎಂದು ಸಂಕಷ್ಟ ಹಂಚಿಕೊಂಡರು.
ಮೂಲಕ ಸೌಕರ್ಯ ಒದಗಿಸುವಂತೆ ಕುಟುಂಬಸ್ಥರು ಪೊಲೀಸ್ ಸಿಬ್ಬಂದಿಯೊಂದಿಗೆ ಮಾತಿಗಿಳಿದಿದ್ದಾರೆ. ಸರ್ಕಾರ ಶಾಶ್ವತ ಸ್ಥಳಾಂತರ ಮಾಡುವುದಾದರೆ ಮಾಡಲಿ. ಭಿಕ್ಷುಕರಿಗೆ ನೀಡಿದಂತೆ ಅಕ್ಕಿ ಹಾಕಿ ಕಳುಹಿಸುವಷ್ಟು ದರಿದ್ರತನ ತಮಗೆ ಬಂದಿಲ್ಲ. ನಾವು ಸಂರಕ್ಷಣೆ ಮಾಡುವಂತೆ ಕೇಳಿಕೊಂಡಿಲ್ಲ. 20 ವರ್ಷ ಸ್ಪಂದಿಸದ ಆಡಳಿತ ವ್ಯವಸ್ಥೆಯ ಸೌಲಭ್ಯಗಳು ನಮಗೆ ಬೇಕಿಲ್ಲ, ನಮ್ಮನ್ನು ಬಂಧ ಮುಕ್ತಗೊಳಿಸಿ ಎಂದು ಮನವಿ ಮಾಡಿದರು.
ಪಿಎಸ್ಐ ಪ್ರಕಾಶರೆಡ್ಡಿ ಡಂಬಳ ಮಾತನಾಡಿ, ನಾವು ನಿಮ್ಮ ರಕ್ಷಣೆಗೆ ಇದ್ದೇವೆ. ಆರೋಪಿತರಂತೆ ನೋಡಿಲ್ಲ. ತಪ್ಪು ಭಾವನೆ ಬೇಡ. ಸಹಾಯಕ ಆಯುಕ್ತರ ನೇತೃತ್ವದ ಅಧಿಕಾರಿಗಳ ತಂಡ ಪಡಿತರ ನೀಡಿ ನಿಮ್ಮನ್ನು ಊರಿಗೆ ಕಳುಹಿಸಿಕೊಡಲಿದೆ ಎಂದು ಮನವೊಲಿಸುವ ಯತ್ನ ಮಾಡಿದರು.