ರಾಯಚೂರು: ಜಿಲ್ಲೆಯಲ್ಲಿ ಉಂಟಾದ ಪ್ರವಾಹದಿಂದ ಜನವಜೀವನ ಅಸ್ತವ್ಯಸ್ತವಾಗಿ ಹಲವಾರು ಜನ ತೊಂದರೆಗೆ ಸಿಲುಕಿದ್ದು ಎಲ್ಲರಿಗೂ ತಿಳಿದಿರುವಂತಹದ್ದು. ಆದರೆ, 2009ರಲ್ಲಿ ಇದಕ್ಕಿಂತಲೂ ಭೀಕರ ಪ್ರವಾಹ ಬಂದು ಲಕ್ಷಾಂತರ ಜನರ ಬದುಕೇ ನಾಶವಾದ ಕರಾಳ ನೆನೆಪುಗಳು ಇನ್ನೂ ಮಾಸಿಲ್ಲ.
2009 ರಲ್ಲಿ ಜಿಲ್ಲೆಯಲ್ಲಿ ಉಂಟಾದ ಪ್ರವಾಹದಿಂದ ಕೃಷ್ಣಾ ನದಿಯ ನೀರು ನುಗ್ಗಿ ಅನೇಕ ಗ್ರಾಮಗಳು ಮುಳುಗಡೆಯಾಗಿದ್ದವು. ಅದರಲ್ಲಿ ಡೊಂಗರಾಂಪುರವೂ ಒಂದು. 2009 ರಲ್ಲಿ ಉಂಟಾದ ನೆರೆಯಿಂದ ಡೊಂಗರಾಂಪುರ ಗ್ರಾಮಸ್ಥರು ಅಕ್ಷರಶಃ ನಲುಗಿ ಹೋಗಿದ್ದರು. ಗ್ರಾಮಕ್ಕೆ ಅಪಾರ ಪ್ರಮಾಣದ ನೀರು ನುಗ್ಗಿದ ಪರಿಣಾಮ ಸಂಪೂರ್ಣ ಜಲಾವೃತ್ತಗೊಂಡಿತ್ತು. ಅನೇಕರು ಮನೆ, ಆಸ್ತಿ-ಪಾಸ್ತಿ ಕಳೆದುಕೊಂಡು ನಿರಾಶ್ರಿತರಾಗಿದ್ದರು. ಆದ್ದರಿಂದ ಸರಕಾರ ಮಾತಾ ಅಮೃತಾನಂದಮಯಿ ಮಠದ ನೆರವಿವಿಂದ ಸಂತ್ರಸ್ತರಿಗೆ ಮನೆಗಳನ್ನು ನಿರ್ಮಿಸಿ 480 ಕುಟುಂಬಗಳನ್ನು ಸ್ಥಳಾಂತರಿಸಿತ್ತು.
ಅದರೆ, ಪ್ರವಾಹದಿಂದ ಸಂತ್ರಸ್ತರಾದವರಿಗೆ ತರಾತುರಿಯಲ್ಲಿ ನಿರ್ಮಾಣ ಮಾಡಿದ ಮನೆಗಳಿಗೆ ಸರಿಯಾಗಿ ಪ್ಲಾಸ್ಟರ್, ಕ್ಯೂರಿಂಗ್ ಹಾಗೂ ಗುಣಮಟ್ಟ ಕಾಪಾಡದ ಕಾರಣ ಕೆಲವೇ ತಿಂಗಳಲ್ಲಿ ಗೋಡೆಗಳು ಬಿರುಕು ಬಿಟ್ಟು, ಮೇಲ್ಚಾವಣಿ ಸೋರಲು ಪ್ರಾರಂಭವಾಗಿದೆ. ಪರಿಣಾಮ ಹಲವರು ಮನೆ ತೊರೆದು ಬೇರೆ ಕಡೆ ವಾಸವಾಗಿದ್ದಾರೆ. ಅಲ್ಲದೇ ಸ್ಥಳಾಂತರಗೊಂಡ ಡೊಂಗರಾಂಪುರ ಗ್ರಾಮದಲ್ಲಿ ರಸ್ತೆ, ಕುಡಿಯುವ ನೀರು, ವಿದ್ಯುತ್, ಶೌಚಾಲಯ ಹಾಗೂ ಇತರ ಮೂಲಭೂತ ಸೌಕರ್ಯಗಳ ಕೊರತೆಯಿಂದಾಗಿ ಇಲ್ಲಿ ವಾಸ ಮಾಡಲು ಸಂತ್ರಸ್ತರು ಹಿಂದೇಟು ಹಾಕುತಿದ್ದಾರೆ.