ರಾಯಚೂರು:ಕೃಷ್ಣಾ ನದಿ ಅಬ್ಬರಿಸುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ದೇವದುರ್ಗ ತಾಲೂಕಿನ ವೀರಗೋಟದ ಸುಕ್ಷೇತ್ರ ಆದಿಮೌನೇಶ್ವರ ದೇವಸ್ಥಾನದ ಆವರಣದತ್ತ ನೀರು ನುಗ್ಗಿದೆ.
ದೇವಸ್ಥಾನದ ಆವರಣದತ್ತ ನೀರು ನುಗ್ಗಿರುವುದರಿಂದ ವೀರಗೋಟಕ್ಕೆ ಆಗಮಿಸಿದ್ದ ಭಕ್ತರಲ್ಲಿ ಆತಂಕ ಮೂಡಿಸಿದೆ. ಇನ್ನು ದೇವಾಲಯಕ್ಕೆ ಭೇಟಿ ನೀಡಿದ ಶಾಸಕ ಶಿವನಗೌಡ ನಾಯಕ್ ಹಾಗೂ ಅಧಿಕಾರಿಗಳು, ಪರಿಶೀಲನೆ ನಡೆಸಿದ್ದಾರೆ.
ಇನ್ನು ಜಿಲ್ಲೆಯ ಹಲವೆಡೆ ನದಿ ಪಾತ್ರದಲ್ಲಿನ ರೈತರ ಜಮೀನುಗಳಿಗೆ ನೀರು ನುಗ್ಗಿ ಬೆಳೆ ಹಾನಿ ಉಂಟಾಗಿದೆ. ರಾಯಚೂರು ತಾಲೂಕಿನ ಗುರ್ಜಾಪುರ ಗ್ರಾಮದ ಬಳಿ ಬರುವ ನೂರಾರು ಎಕರೆ ಪ್ರದೇಶದಲ್ಲಿ ನಾಟಿ ಮಾಡಿರುವ ಭತ್ತದ ಗದ್ದೆಗಳಿಗೆ ನೀರು ನುಗ್ಗಿ ಹೊಲ-ಗದ್ದೆಗಳು ಜಲಾವೃತಗೊಂಡಿವೆ.
ಅಲ್ಲದೆ ಜಿಲ್ಲೆಯ ದೇವದುರ್ಗ ತಾಲೂಕಿನ ನಿಲುವಂಜಿ, ಹೂವಿನ ಹೆಡಗಿ, ಕೊಪ್ಪರ, ಕೂಪರ್ ಗ್ರಾಮಗಳ ಜಮೀನುಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ. ಸದ್ಯ ನಾರಾಯಣಪುರ ಜಲಾಶಯದಿಂದ 2.90 ಲಕ್ಷ ಕ್ಯೂಸೆಕ್ ನೀರು ಬಿಡುಗಡೆಯಾಗಿದ್ದು, ಮತ್ತಷ್ಟು ಜಮೀನು ಜಲಾವೃತಗೊಳ್ಳುವ ಸಾಧ್ಯತೆಯಿದೆ.