ರಾಯಚೂರು: ಕೇಂದ್ರ ಹಾಗು ರಾಜ್ಯ ಸರಕಾರ ಸುಗ್ರೀವಾಜ್ಞೆ ಮೂಲಕ ಭೂಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆಗಳ ತಿದ್ದುಪಡಿ ತರ ಹೊರಟಿರುವುದು ರೈತರ ಪಾಲಿಗೆ ಮರಣ ಶಾಸನವಾಗಲಿದೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ದೂರಿದ್ದಾರೆ.
ರೈತ ಪರ ಸರಕಾರ ಎನ್ನುವ ನೈತಿಕತೆ ಕಳೆದುಕೊಂಡಿದೆ:ಕೋಡಿಹಳ್ಳಿ ಚಂದ್ರಶೇಖರ್
ಭೂ ಸುಧಾರಣಾ ಕಾಯ್ದೆ ಹಾಗು ಎಪಿಎಂಸಿ ತಿದ್ದುಪಡಿ ಕಾಯ್ದೆಗಳಿಂದ ದೇಶದಲ್ಲಿರುವ ಶೇ.80 ರಷ್ಟು ಸಣ್ಣ,ಅತಿಸಣ್ಣ ರೈತರು ಕೃಷಿಯಿಂದ ವಿಮುಖರಾಗಲಿದ್ದಾರೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ಆರೋಪಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯ ಸರಕಾರ ಕೊರೊನಾ ವೇಳೆ ಹಲವು ಕಾಯ್ದೆಗಳನ್ನು ಜಾರಿಗೊಳಿಸಿದ್ದು, ಭೂಸುಧಾರಣಾ ಕಾಯ್ದೆ ಹಾಗು ಎಪಿಎಂಸಿ ತಿದ್ದುಪಡಿ ಕಾಯ್ದೆಗಳಿಂದ ದೇಶದಲ್ಲಿರುವ ಶೇ.80 ರಷ್ಟು ಸಣ್ಣ,ಅತಿಸಣ್ಣ ರೈತರು ಕೃಷಿಯಿಂದ ವಿಮುಖರಾಗಲಿದ್ದಾರೆ. ಕೃಷಿ ಉತ್ಪನ್ನ ಮಾರುಕಟ್ಟೆ ರೈತರ ಕೈ ತಪ್ಪಲಿದೆ. ಸರಕಾರ ಬಂಡವಾಳಶಾಹಿ, ಕಾರ್ಪೊರೇಟ್ ಗಳ ಪರವಾಗಿದೆ. ಮುಂದಿನ ದಿನಗಳಲ್ಲಿ ಕೃಷಿ ವಲಯ ಇನ್ನೂ ಸಂಕಷ್ಟಕ್ಕೆ ಸಿಲುಕಲಿದ್ದು, ರಾಜ್ಯ ಸರಕಾರ ರೈತ ಪರ ಸರಕಾರ ಎನ್ನುವ ನೈತಿಕತೆ ಕಳೆದುಕೊಂಡಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾವುದೇ ಕಾಯ್ದೆಗಳನ್ನು ಜಾರಿಗೊಳಿಸುವ ಮುನ್ನ ಜನರ ನಡುವೆ ಚರ್ಚೆಗೆ ಅವಕಾಶ ನೀಡಬೇಕು.
ಆದರೆ ಸರಕಾರ ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸುವ ಮೂಲಕ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದೆ. ಯಾವುದೇ ಕಾರಣಕ್ಕೂ ಈ ಕಾಯ್ದೆಗಳು ಜಾರಿಗೊಳ್ಳಲು ಬಿಡುವುದಿಲ್ಲ ಎಂದರು.