ರಾಯಚೂರು/ ಲಿಂಗಸುಗೂರು: ಕರ್ನಾಟಕ ಏಕೀಕರಣಗೊಂಡು 75 ವರ್ಷ ಕಳೆಯುತ್ತ ಬಂದರೂ ರಾಜ್ಯದ ಇತಿಹಾಸವನ್ನು ಪಠ್ಯಪುಸ್ತಕಗಳಲ್ಲಿ ಕನ್ನಡೀಕರಣಗೊಳಿಸದಿರುವುದನ್ನು ವಿರೋಧಿಸಿ ಕರ್ನಾಟಕ ನವನಿರ್ಮಾಣ ಸೇನೆ ಪ್ರತಿಭಟನೆ ನಡೆಸಿತು.
ಇಂದು ರಾಯಚೂರು ಜಿಲ್ಲೆಯ ಲಿಂಗಸುಗೂರು ಉಪ ವಿಭಾಗಾಧಿಕಾರಿ ಕಚೇರಿಯ ತಹಶೀಲ್ದಾರ್ ಶಾಲಂಸಾಬ್ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ ಪ್ರತಿಭಟನಾಕಾರರು, ರಾಜ್ಯದ ಅರಸರು, ಸೇನಾನಿಗಳು, ಕಲೆ, ಸಾಹಿತ್ಯ ಸೇರಿದಂತೆ ಐತಿಹಾಸಿಕ ವಿಷಯಗಳನ್ನು ಕನ್ನಡ ಪಠ್ಯದಲ್ಲಿ ಅಳವಡಿಸಿ ಮಕ್ಕಳಿಗೆ ಅರಿವು ಮೂಡಿಸಲು ಮುಂದಾಗುವಂತೆ ಒತ್ತಾಯಿಸಿದರು.
ಔರಂಗಜೇಬ್, ಮೊಹ್ಮದಘೋರಿ, ದೆಹಲಿ ಸುಲ್ತಾನ್, ಮರಾಠರು, ಮೊಗಲರ ಇತಿಹಾಸವನ್ನು ಓದುತ್ತಾ ರಾಜ್ಯದ ಇತಿಹಾಸ ಕಣ್ಮರೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದ ಹಲಗಲಿ ಬೇಡರು, ಕಿತ್ತೂರು ರಾಣಿ ಚೆನ್ನಮ್ಮ, ರಾಜಾ ವೆಂಕಟಪ್ಪ ನಾಯಕ, ನರಗುಂದ ಬಾಬಾ ಸಾಹೇನ್ ಇತಿಹಾಸ ಮರೀಚಿಕೆಯಾಗಿದೆ. ಈ ಎಲ್ಲ ಗೊಂದಲಗಳ ಮಧ್ಯೆ ಇರುವ ಮಕ್ಕಳಿಗೆ ಕನ್ನಡ ನಾಡು, ನುಡಿ, ರಾಜರು ಹೋರಾಟಗಾರರ ಇತಿಹಾಸವನ್ನು ಪಠ್ಯಗಳಲ್ಲಿ ಕನ್ನಡೀಕರಣಗೊಳಿಸಬೇಕು. ಇಲ್ಲದಿದ್ದರೆ ಹೋರಾಟ ನಡೆಸುವುದಾಗಿ ಕರ್ನಾಟಕ ನವನಿರ್ಮಾಣ ವೇದಿಕೆ ತಾಲೂಕು ಘಟಕ ಅಧ್ಯಕ್ಷ ಜಗದೀಶ ಪಾಟೀಲ್ ಎಚ್ಚರಿಕೆ ನೀಡಿದರು.