ರಾಯಚೂರು: ಜಿಲ್ಲೆಯ 7 ಕ್ಷೇತ್ರಗಳಲ್ಲಿ ರಾಯಚೂರು ನಗರ ವಿಧಾನಸಭಾ ಕ್ಷೇತ್ರವನ್ನು ಶಕ್ತಿ ಕೇಂದ್ರ ಎಂದು ಕರೆಯಲಾಗುತ್ತದೆ. ಸತತ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಡಾ. ಶಿವರಾಜ ಪಾಟೀಲ್ ಹ್ಯಾಟ್ರಿಕ್ ಸಾಧನೆಯ ಪ್ರಯತ್ನದಲ್ಲಿದ್ದಾರೆ. ಆದರೆ, ಬಿಜೆಪಿಯಲ್ಲಿ ಟಿಕೆಟ್‌ಗಾಗಿ ಪೈಪೋಟಿ ಏರ್ಪಟ್ಟಿದೆ. ಮತ್ತೊಂದೆಡೆ, ಕಾಂಗ್ರೆಸ್‌ನಲ್ಲಿ ಟಿಕೆಟ್ ಆಕಾಂಕ್ಷಿಗಳು ಅಧಿಕವಾಗಿದ್ದಾರೆ. ಹೀಗಾಗಿ ಕಾಂಗ್ರೆಸ್ ಯಾರಿಗೆ ಮಣೆ ಹಾಕುತ್ತದೆ ಎಂಬುವುದರ ಮೇಲೆ ಚುನಾವಣಾ ಹಣಾಹಣಿ ನಿರ್ಧಾರವಾಗಲಿದೆ.
ಏಳು ಕ್ಷೇತ್ರಗಳ ಪೈಕಿ ರಾಯಚೂರು ನಗರ ಮತ್ತು ಸಿಂಧನೂರು ಕ್ಷೇತ್ರಗಳು ಮಾತ್ರ ಸಾಮಾನ್ಯ ವರ್ಗಕ್ಕೆ ಮೀಸಲಾಗಿವೆ. ಕಾಂಗ್ರೆಸ್‌ನ ಭದ್ರ ಕೋಟೆ ಎಂದೇ ರಾಯಚೂರು ಕ್ಷೇತ್ರ ಬಿಂಬಿತ. ಈ ಕ್ಷೇತ್ರದಲ್ಲಿ ಸದ್ಯ ಮೂರು ರಾಜಕೀಯ ಪಕ್ಷಗಳು ಪ್ರಬಲವಾಗಿರುವುದಲ್ಲದೇ, ಪಕ್ಷಕ್ಕಿಂತ ವೈಯಕ್ತಿಕ ಬಲಾಬಲದ ಮೇಲೆ ಗೆಲುವು ನಿರ್ಧಾರವಾಗಲಿದೆ.
ಇದುವರೆಗೆ ನಡೆದ 15 ಚುನಾವಣೆಗಳಲ್ಲಿ ಏಳು ಬಾರಿ ಮುಸ್ಲಿಂ ಸಮುದಾಯದ ಅಭ್ಯರ್ಥಿಗಳಿಗೆ ಮತದಾರರು ಮಣೆ ಹಾಕಿದ್ದಾರೆ. ಜೊತೆಗೆ ಇತರ ಸಮುದಾಯದ ಅಭ್ಯರ್ಥಿಗಳನ್ನೂ ಮತದಾರರು ಗೆಲ್ಲಿಸಿದ್ದಾರೆ. ಆದರೆ, ಸತತ ಎರಡು ಬಾರಿ ಗೆದ್ದು ಶಾಸಕರಾದವರಿಗೆ ಹ್ಯಾಟ್ರಿಕ್ ಗೆಲುವು ದಕ್ಕಿಲ್ಲ. 2013ರಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿ ಗೆಲುವು ಕಂಡಿದ್ದ ಡಾ. ಶಿವರಾಜ ಪಾಟೀಲ್ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಬಿಜೆಪಿ ಸೇರಿದ್ದರು. 2018ರಲ್ಲಿ ಬಿಜೆಪಿಯಿಂದ ಸ್ಪರ್ಧೆ ಮಾಡಿ ಎರಡನೇ ಬಾರಿ ಶಾಸಕರಾಗಿದ್ದಾರೆ. ಈ ಬಾರಿ ಸಹ ಕಣಕ್ಕಿಳಿಯಲು ಸಿದ್ಧತೆ ನಡೆಸಿದ್ದಾರೆ. ಆದರೆ, ಇನ್ನಿಬ್ಬರು ಮುಖಂಡರು ಟಿಕೆಟ್ ಮೇಲೆ ಕಣ್ಣಿಟ್ಟಿದ್ದಾರೆ. ಇದುವರೆಗೆ ಟಿಕೆಟ್ ಫೈನಲ್ ಆಗರಿವುದು ಗೊಂದಲಕ್ಕೆ ಕಾರಣವಾಗಿದೆ. ಆದರೂ, ಶಿವರಾಜ್ ಪಾಟೀಲ್ ಟಿಕೆಟ್ ಸಿಗಲಿದೆ ಎನ್ನುವ ಮಾತುಗಳು ಪಕ್ಷದ ವಲಯದಲ್ಲಿ ಕೇಳಿ ಬರುತ್ತದೆ.
ಕಾಂಗ್ರೆಸ್‌ನಲ್ಲಿ ಟಿಕೆಟ್ ಕಗ್ಗಂಟು:ಕಾಂಗ್ರೆಸ್‌ನಲ್ಲಿ ಟಿಕೆಟ್ ಹಂಚಿಕೆ ಕಗ್ಗಂಟಾಗಿ ಏರ್ಪಟ್ಟಿದೆ. ಹಿಂದಿನಿಂದಲೂ ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ನೀಡುತ್ತಾ ಬಂದಿರುವ ಕಾಂಗ್ರೆಸ್, ಈ ಬಾರಿ ತನ್ನ ನಿಲುವು ಬದಲಿಸುತ್ತಾ ಎನ್ನುವ ವಿಚಾರ ಮುನ್ನೆಲೆಗೆ ಬಂದಿದೆ. ಟಿಕೆಟ್‌ಗಾಗಿ ಒಟ್ಟು 16 ಜನರು ಅರ್ಜಿ ಸಲ್ಲಿಸಿದ್ದಾರೆ. ಅದರಲ್ಲಿ ಮಾಜಿ ಶಾಸಕ ಸೈಯದ್ ಯಾಸೀನ್ 12 ಜನ ಮುಸ್ಲಿಂ ಸಮುದಾಯಕ್ಕೆ ಸೇರಿದವರು ಆಗಿದ್ದಾರೆ. ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಮತದಾರರು ಅಧಿಕ ಸಂಖ್ಯೆಯಲ್ಲಿದ್ದು, ಮುಸ್ಲಿಮರಿಗೆ ಟಿಕೆಟ್ ನೀಡಬೇಕು ಎನ್ನುವ ಬಲವಾದ ಒತ್ತಾಯ ಕೇಳಿ ಬರುತ್ತಿದೆ. ಅಲ್ಲದೇ, ಸಮುದಾಯದಿಂದ ಪ್ರತಿಭಟನೆಗಳನ್ನು ಸಹ ನಡೆಸಲಾಗಿದೆ.