ಕರ್ನಾಟಕ

karnataka

ETV Bharat / state

ಅಕ್ಕಿ ಖರೀದಿ ಕುರಿತಂತೆ ಪರಿಶೀಲನೆ ನಡೆಸಲಾಗುತ್ತಿದೆ: ಸಚಿವ ಕೆ.ಹೆಚ್.ಮುನಿಯಪ್ಪ - ಆರ್ ಬಿ ತಿಮ್ಮಾಪುರ

ಪಡಿತರ ಚೀಟಿ ಹೊಂದಿರುವವರಿಗೆ 5 ಕೆ.ಜಿ ಅಕ್ಕಿ ವಿತರಣೆ ಮಾಡಲಾಗುತ್ತಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಸಚಿವ ಕೆ.ಹೆಚ್.ಮುನಿಯಪ್ಪ ತಿಳಿಸಿದರು.

ಸಚಿವ ಕೆ ಹೆಚ್​ ಮುನಿಯಪ್ಪ
ಸಚಿವ ಕೆ ಹೆಚ್​ ಮುನಿಯಪ್ಪ

By ETV Bharat Karnataka Team

Published : Dec 17, 2023, 10:38 PM IST

ಅಕ್ಕಿ ಖರೀದಿ ಕುರಿತು ಸಚಿವ ಕೆ.ಹೆಚ್.ಮುನಿಯಪ್ಪ ಹೇಳಿಕೆ

ರಾಯಚೂರು: ರಾಜ್ಯದ ಪಡಿತರ ಚೀಟಿದಾರರಿಗೆ ಅಕ್ಕಿ ನೀಡಲು ತೆಲಂಗಾಣ, ಆಂಧ್ರ ಹಾಗೂ ಛತ್ತೀಸ್‌ಗಢ ರಾಜ್ಯಗಳಿಂದ ಅಕ್ಕಿ ಖರೀದಿ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಸಚಿವ ಕೆ.ಹೆಚ್.ಮುನಿಯಪ್ಪ ಹೇಳಿದ್ದಾರೆ. ರಾಯಚೂರು ನಗರದ ಹೊರವಲಯದ ಯರಮರಸ್ ಸರ್ಕ್ಯೂಟ್ ಹೌಸ್​ನಲ್ಲಿಂದು ತಮ್ಮ ಇಲಾಖೆಯ ಅಧಿಕಾರಿಗಳ ಜೊತೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಈಗ ಪಡಿತರ ಚೀಟಿ ಹೊಂದಿದವರಿಗೆ ಐದು ಕೆಜಿ ಅಕ್ಕಿ ವಿತರಣೆ ಮಾಡಲಾಗುತ್ತಿದೆ. ಇದರೊಂದಿಗೆ ಹೆಚ್ಚುವರಿ ಐದು ಕೆ.ಜಿ ಅಕ್ಕಿಯ ಹಣವನ್ನು ಪಡಿತರದಾರರ ಖಾತೆಗೆ ಜಮೆ ಮಾಡಲಾಗುತ್ತಿದೆ. ಶೀಘ್ರದಲ್ಲೇ ಹಣದ ಬದಲು ಅಕ್ಕಿ ನೀಡಲು ಪ್ರಯತ್ನ ನಡೆಸಲಾಗುತ್ತಿದೆ ಎಂದರು. ತೆಲಂಗಾಣ, ಆಂಧ್ರ ಮತ್ತು ಛತ್ತೀಸ್​ಗಡದಲ್ಲಿ ಅಕ್ಕಿ ಖರೀದಿಗೆ ಪರಿಶೀಲನೆ ನಡೆದಿದೆ. ರಾಜ್ಯದಲ್ಲಿ ಒಟ್ಟು 1.16 ಕೋಟಿ ಪಡಿತರ ಚೀಟಿಗಳಿದ್ದು, 4 ಕೋಟಿ ಫಲಾನುಭವಿಗಳಿದ್ದಾರೆ. ಅಕ್ಕಿಯ ಬದಲು 644 ಕೋಟಿ ರೂಪಾಯಿ ಹಣವನ್ನು ಪಡಿತರ ಚೀಟಿದಾರ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹಾಕಲಾಗುತ್ತಿದೆ. ಕೆಲವರಿಗೆ ಬ್ಯಾಂಕ್ ಖಾತೆ ಇಲ್ಲದ ಕಾರಣ ಹಣ ಜಮಾ ಮಾಡಲು ಸಮಸ್ಯೆಯಾಗಿದೆ ಎಂದು ಹೇಳಿದರು.

ಹೊಸದಾಗಿ ರಾಜ್ಯದಲ್ಲಿ 2.95 ಅರ್ಜಿಗಳು ಬಾಕಿ ಇದ್ದು, ರಾಯಚೂರು ಜಿಲ್ಲೆಯಲ್ಲಿ 12 ಸಾವಿರ ಅರ್ಜಿಗಳು ಬಂದಿವೆ. 15 ದಿನದೊಳಗೆ ಪರಿಶೀಲಿಸಿ ಕಾರ್ಡ್ ವಿತರಣೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

ಲೋಕಸಭೆ ಚುನಾವಣೆಯಲ್ಲಿ ರಾಜ್ಯದ 28 ಕ್ಷೇತ್ರಗಳಲ್ಲಿ ಕನಿಷ್ಠ 20 ಕ್ಷೇತ್ರಗಳಲ್ಲಿ ಜಯ ಸಾಧಿಸುವ ಗುರಿ ಇದೆ. ಹೈಕಮಾಂಡ್ ಆದೇಶದಂತೆ ರಾಷ್ಟ್ರ ರಾಜಕಾರಣದಿಂದ ರಾಜ್ಯ ರಾಜಕಾರಣಕ್ಕೆ ಬಂದಿದ್ದೇನೆ. ಲೋಕಸಭೆ ಚುನಾವಣೆಗೆ ನಿಲ್ಲುವ ಬಗ್ಗೆ ಯೋಚಿಸಿಲ್ಲ. ಪಕ್ಷದ ನಾಯಕರು ಯಾವ ನಿರ್ಧಾರ ತೆಗೆದುಕೊಳ್ತಾರೋ ಅದಕ್ಕೆ ನಾನು ನಿಷ್ಠನಾಗಿರುತ್ತೇನೆ ಎಂದರು. ಸಚಿವ ಎನ್.ಎಸ್.ಬೋಸರಾಜು ಜೊತೆಗಿದ್ದರು.

ಸದಾಶಿವ ಆಯೋಗದ ವರದಿ ಕುರಿತು: ನಗರದ ವಾಲ್ಕಟ್ ಮೈದಾನದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿದ ಸಚಿವರು, ಸರ್ಕಾರ ಸದಾಶಿವ ಆಯೋಗ ವರದಿ ಜಾರಿ ಮಾಡಲಿದೆ ಎಂದು ಭರವಸೆ ನೀಡಿದರು.

ಕಾಂಗ್ರೆಸ್ ನಾಯಕರಿಗೆ ಮನವಿ: ಸಚಿವ ಆರ್.ಬಿ.ತಿಮ್ಮಾಪುರ ಕೂಡಾ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಸದಾಶಿವ ಆಯೋಗ ಜಾರಿ ಮಾಡುತ್ತದೆ ಎಂದರು. ಮುಂದುವರೆದು ಮಾತನಾಡಿ, ರಾಯಚೂರು ಜಿಲ್ಲೆಯಿಂದ ಮುಂದಿನ ದಿನಗಳಲ್ಲಿ ಮಾದಿಗ ಸಮುದಾಯದ ಒಬ್ಬರನ್ನು ಶಾಸಕರನ್ನಾಗಿ ಮಾಡಬೇಕೆಂದು ಕಾಂಗ್ರೆಸ್ ನಾಯಕರಿಗೆ ಮನವಿ ಮಾಡಿದರು.

ಮಾದಿಗ ಸಮುದಾಯದಿಂದ ಕೆ.ಹೆಚ್.ಮುನಿಯಪ್ಪ, ಆರ್.ಬಿ.ತಿಮ್ಮಾಪುರ, ಎನ್.ಎಸ್.ಬೋಸರಾಜು ಇತರರಿಗೆ ಸನ್ಮಾನಿಸಿ ಅಭಿನಂದನೆ ಸಲ್ಲಿಸಲಾಯಿತು.

ಇದನ್ನೂ ಓದಿ:ಹಣದ ಬದಲು ಅಕ್ಕಿ ವಿತರಿಸಲು ಕ್ರಮ ವಹಿಸಲಾಗುತ್ತದೆ: ಕೆ ಹೆಚ್ ಮುನಿಯಪ್ಪ

ABOUT THE AUTHOR

...view details