ರಾಯಚೂರು: ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಅಪ್ಪಣೆ ನೀಡಿದರೆ ರೈತರ ಹಿತಕ್ಕಾಗಿ ಯುಕೆಪಿ ನೀರಾವರಿ ಯೋಜನೆಯನ್ನು ರಾಷ್ಟ್ರೀಯ ನೀರಾವರಿ ಯೋಜನೆಯಾಗಿ ಘೋಷಿಸುವಂತೆ ಆಗ್ರಹಿಸಿ ಬಸವಕಲ್ಯಾಣದಿಂದ ರಾಜಭವನದವರೆಗೆ ಪಾದಯಾತ್ರೆ ನಡೆಸಲು ಸಿದ್ದ ಎಂದು ಜೆಡಿಎಸ್ ಮುಖಂಡ ವೈ.ಎಸ್.ವಿ. ದತ್ತಾ ಹೇಳಿದ್ದಾರೆ.
ದೇವೇಗೌಡರು ಅಪ್ಪಣೆ ಕೊಟ್ರೆ ರೈತರಿಗಾಗಿ ಪಾದಯಾತ್ರೆ: ವೈ.ಎಸ್.ವಿ. ದತ್ತಾ - YSV Datta
ಜೆಡಿಎಸ್ ಪಕ್ಷ ಸಂಘಟನೆಗಾಗಿ ಹಮ್ಮಿಕೊಂಡಿದ್ದ ಸಮಾವೇಶದಲ್ಲಿ ದೇವದುರ್ಗ ತಾಲೂಕಿನ ನೂತನ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮ ನಡೆಯಿತು.
ಜಿಲ್ಲೆಯ ದೇವದುರ್ಗ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಜೆಡಿಎಸ್ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡುತ್ತ, ಸಮುದಾಯದ ಹಿತಕ್ಕಾಗಿ ಪಾದಯಾತ್ರೆ ನಡೆಸುವ ಬದಲಿಗೆ ರೈತರ ಹಿತ ಕಾಯುವುದಕ್ಕೆ ಹೋರಾಟ ಮಾಡಬೇಕಾಗಿದೆ. ರಾಜ್ಯದಲ್ಲಿ ಮೀಸಲಾತಿಗಾಗಿ ಆಗ್ರಹಿಸಿ ಪಾದಯಾತ್ರೆ ಮಾಡಲಾಗುತ್ತಿದೆ. ನಾವು ಕೃಷ್ಣಾ ಮೇಲ್ದಂಡೆ ಯೋಜನೆಗಾಗಿ ಪಾದಯಾತ್ರೆ ಮಾಡಲು ತಯಾರಾಗಿದ್ದು, ಈ ಮೂಲಕ ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ನೀರಾವರಿ ಯೋಜನೆಯನ್ನಾಗಿ ಘೋಷಣೆ ಮಾಡಲು ಆಗ್ರಹಿಸೋಣ ಎಂದರು.
ಸುಪ್ರೀಂ ಕೋರ್ಟ್ನಲ್ಲಿ ಎಸ್ಎಲ್ಪಿ ಅರ್ಜಿ ವಿಲೇವಾರಿ ಮಾಡಿ ಯೋಜನೆಯ ಲಾಭ ರೈತರಿಗೆ ಸಿಗುವಂತೆ ಮಾಡುವ ಕಡೆ ಕೇಂದ್ರ ಸರ್ಕಾರ ಮುಂದಾಗಬೇಕು. ದೇವೇಗೌಡರಿಗೆ ಲಿಂಗಾಯತ ವಿರೋಧಿ ಎನ್ನುವ ಪಟ್ಟ ಕಟ್ಟಲಾಗಿದೆ. ಆದರೆ ಜೇನು ತುಪ್ಪದ ಬಾಟಲಿ ಮೇಲೆ ಕಿಡಿಗೇಡಿಗಳು ವಿಷದ ಬಾಟಲಿ ಅಂತ ಸ್ಟಿಕರ್ ಅಂಟಿಸಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು. ಹೆಚ್.ಡಿ. ದೇವೇಗೌಡರು ಜಿಲ್ಲೆಗೆ ಎನ್ ಆರ್ಬಿಸಿ ತಂದಿದ್ದಕ್ಕೆ ದೇವದುರ್ಗದ ಗಾಣಧಾಳ ಗ್ರಾಮದ ರೈತ ಪ್ರಭಾಕರ್ ರೆಡ್ಡಿ ದೇವೇಗೌಡರ ಪ್ರತಿಮೆ ಮಾಡಿ ಪೂಜಿಸುತ್ತಿದ್ದಾನೆ. ಆ ರೈತನ ಅಭಿಮಾನವೇ ಈಗಿನ ಕಾರ್ಯಕ್ರಮ ಹಮ್ಮಿಕೊಳ್ಳಲು ಕಾರಣವಾಗಿದೆ ಎಂದರು.