ರಾಯಚೂರು:ಶಾಸಕ ಸ್ಥಾನಕ್ಕೆ ರಾಜೀನಾಮೆಯಿಂದ ತೆರವಾದ ಮಸ್ಕಿ ಕ್ಷೇತ್ರದ ಉಪ ಚುನಾವಣೆಗೆ ಬಿಜೆಪಿ, ಕಾಂಗ್ರೆಸ್ ಭರ್ಜರಿ ಸಿದ್ದತೆ ನಡೆಸುತ್ತಿವೆ. ಇತ್ತ ಜೆಡಿಎಸ್ ತಟಸ್ಥ ನೀತಿ ಅನುಸರಿಸಿ ಮಸ್ಕಿ ಉಪಚುನಾವಣೆಗೆ ಸ್ಪರ್ಧೆ ಮಾಡಲ್ಲ ಎಂದು ಮುಖಂಡರು ಸ್ಪಷ್ಟನೆ ನೀಡಿದ್ದರು. ಆದ್ರೆ ಇದೀಗ ಜೆಡಿಎಸ್ ತೀರ್ಮಾನ ಬದಲಾಗಿದ್ದು, ಮಸ್ಕಿ ಉಪಚುನಾವಣೆಗೆ ಅಭ್ಯರ್ಥಿಯನ್ನ ಕಣಕ್ಕಿಳಿಸಲಿದ್ದಾರೆ ಎನ್ನಲಾಗ್ತಿದೆ.
ಆಪರೇಷನ್ ಕಮಲಕ್ಕೆ ಒಳಗಾಗಿ ಮಾಜಿ ಶಾಸಕ ಪ್ರತಾಪ ಗೌಡ ಪಾಟೀಲ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರಿಂದ ಜಿಲ್ಲೆಯ ಮಸ್ಕಿ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ಎದುರಾಗಲಿದೆ. ಇದಕ್ಕಾಗಿ ಬಿಜೆಪಿಯಿಂದ ಸ್ಪರ್ಧಿಸಲು ಇಚ್ಛಿಸಿರುವ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಹಾಗೂ ಬಿಜೆಪಿ ತೊರೆದಿರುವ ಬಸವನಗೌಡ ತುರುವಿಹಾಳ ಕಾಂಗ್ರೆಸ್ನಿಂದ ಸ್ಪರ್ಧಿಸಲಿದ್ದಾರೆ ಎನ್ನುವ ಮಾತುಗಳಿವೆ. ಹೀಗಾಗಿ ಮಸ್ಕಿ ಉಪ ಕದನದಲ್ಲಿ ಬಿಜೆಪಿ ವರ್ಸಸ್ ಕಾಂಗ್ರೆಸ್ ಆಗಲಿದೆ ಎನ್ನುವ ರಾಜಕೀಯ ಲೆಕ್ಕಾಚಾರವಾಗಿತ್ತು. ಆದ್ರೆ ಇಷ್ಟು ದಿನಗಳ ಕಾಲ ಸೈಲೆಂಟ್ ಆಗಿದ್ದ ಜೆಡಿಎಸ್ ಇದೀಗ ಮಸ್ಕಿ ಬೈ ಎಲೆಕ್ಷನ್ನಲ್ಲಿ ಅಭ್ಯರ್ಥಿಯನ್ನ ಕಣಕ್ಕಿಳಿಸಲಿದೆ. ಇದರಿಂದ ಉಪಕದನ ಮತ್ತಷ್ಟು ರಂಗು ಪಡೆಯುವ ಸಾಧ್ಯತೆಯಿದೆ.
ಹಣವಿಲ್ಲ ಅಂದಿದ್ದರು ದೇವೇಗೌಡರು!
ಮಸ್ಕಿ, ಬಸವಕಲ್ಯಾಣ ವಿಧಾನಸಭಾ ಕ್ಷೇತ್ರ, ಬೆಳಗಾವಿ ಲೋಕಸಭೆ, ಮಸ್ಕಿ ಉಪಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ. ಜೆಡಿಎಸ್ ಪಕ್ಷದಲ್ಲಿ ಹಣವಿಲ್ಲ, ಹೀಗಾಗಿ ಎಲ್ಲಿಯೂ ಅಭ್ಯರ್ಥಿಗಳನ್ನ ನಿಲ್ಲಿಸುವುದಿಲ್ಲ. ಅಲ್ಲದೇ ಹೆಚ್.ಡಿ. ಕುಮಾರಸ್ವಾಮಿ ಈ ಹಿಂದೆ ಈ ಬಗ್ಗೆ ಹೇಳಿದ್ದು, ಅವರ ಹೇಳಿಕೆಯನ್ನು ನಾನು ಬೆಂಬಲಿಸುತ್ತೇನೆ ಎಂದು ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ರಾಯಚೂರಿನಲ್ಲಿ ಹೇಳಿದ್ದರು.