ರಾಯಚೂರು : ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಮಾಡಿಕೊಂಡಿರುವುದು ಅವಕಾಶಾವಾದಿ ರಾಜಕಾರಣನಾ? ಇಲ್ಲ ಸಿದ್ಧಾಂತವಾದ ರಾಜಕಾರಣನಾ? ಎಂದು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಪ್ರಶ್ನಿಸಿದ್ದಾರೆ.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿ-ಜೆಡಿಎಸ್ ಮೈತ್ರಿ ವಿಚಾರಕ್ಕೆ ಪ್ರಶ್ನೆಗೆ ಪ್ರತಿಕ್ರಿಯಿಸಿ, ಯಾರಿಗೆ ಲಾಭ ನಷ್ಟ ಅನ್ನೋದು ಆಮೇಲೆ, ಮೊದಲು ಒಬ್ಬರಿಗೊಬ್ಬರು ಬೈದುಕೊಂಡಿದ್ದರು. ಇವತ್ತು ಜನ ಒಂದನ್ನು ಅರ್ಥ ಮಾಡಿಕೊಳ್ಳಬೇಕು. ಹೆಚ್ .ಡಿ ಕುಮಾರಸ್ವಾಮಿ ಸಿಎಂ ಆಗಿದ್ದಾಗ, ಅವರನ್ನು ಸಿಎಂ ಸ್ಥಾನದಿಂದ ತೆಗೆದಿದ್ಯಾರು?, ಕಾಂಗ್ರೆಸ್ ಜೊತೆಯಿದ್ದಾಗ ಬಿಜೆಪಿಯವರು ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದರು. ಬಿಜೆಪಿಯವರು ಸರ್ಕಾರ ತೆಗೆದರು. ಈಗ ಕುಮಾರಸ್ವಾಮಿ ಅವರು ಬಿಜೆಪಿ ಜೊತೆಗೆ ಕೈಜೋಡಿಸುತ್ತಿದ್ದಾರೆ ಅಂದ್ರೆ ಏನು ಅರ್ಥ ಎಂದರು.
ಕಾವೇರಿ ನೀರಿನ ವಿವಾದಕ್ಕೆ ಕನ್ನಡಪರ ಸಂಘಟನೆಗಳ ವಿರುದ್ಧ ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಮೇಕೆದಾಟು ಯೋಜನೆ ಆ ಭಾಗದ ರೈತರ ಹಿತಕಾಪಾಡಲು ಮಾಡಿದ ಯೋಜನೆಯಾಗಿದೆ. ಹೀಗಾಗಿ ಕಾಂಗ್ರೆಸ್ ದೊಡ್ಡ ಪಾದಯಾತ್ರೆ ಮಾಡಿತ್ತು. ಮೇಕೆದಾಟು ಯೋಜನೆಗೆ ಯಾವುದೇ ಅಡ್ಡಿ ಇಲ್ಲವೆಂದು ಸುಪ್ರಿಂ ಕೋರ್ಟ್ ಹೇಳಿದೆ. ನಮ್ಮ ನೀರು ನಾವು ಬಳಕೆ ಮಾಡಿಕೊಳ್ಳಬಹುದು ಅಂತ ಕೋರ್ಟ್ ಹೇಳಿದೆ. ಕನ್ನಡಪರ ಸಂಘಟನೆಗಳ ಬಗ್ಗೆ ಹರಿಹಾಯುವುದು ಇಲ್ಲ. ಮಳೆಯಿಲ್ಲದೆ ಕೆಆರ್ಎಸ್ ಡ್ಯಾಂನಲ್ಲಿ ನೀರಿಲ್ಲ. ಹೀಗಾಗಿ ಈಗ ಸಮಸ್ಯೆ ಉಂಟಾಗಿದೆ. ರೈತರ ಹಿತಕಾಪಾಡುವುದನ್ನು ನಮ್ಮ ಸರ್ಕಾರ ಮಾಡುತ್ತೆ ಎಂದು ಶರಣಪ್ರಕಾಶ್ ಪಾಟೀಲ್ ಹೇಳಿದರು.