ರಾಯಚೂರು: ನಾರಾಯಣಪುರ ಜಲಾಶಯದಿಂದ ಕೃಷ್ಣಾ ನದಿಗೆ ಹೆಚ್ಚಿನ ಪ್ರಮಾಣದ ನೀರು ಹರಿ ಬಿಟ್ಟ ಪರಿಣಾಮ ರಾಯಚೂರು ಜಿಲ್ಲೆಯ ಕೃಷ್ಣಾ ನದಿಯ ದಡದಲ್ಲಿ ಪ್ರವಾಹ ಭೀತಿ ಎದುರಾಗಿದೆ.
ಕೃಷ್ಣಾ ನದಿ ಪಾತ್ರದಲ್ಲಿ ಹೆಚ್ಚುತ್ತಿರುವ ಪ್ರವಾಹ ಭೀತಿ ಈಗಾಗಲೇ ಲಿಂಗಸೂಗೂರು ತಾಲೂಕಿನ ಶೀಲಹಳ್ಳಿ ಗ್ರಾಮದ ಬಳಿಯ ಸೇತುವೆ ಸಂಪೂರ್ಣವಾಗಿ ಜಲಾವೃತ್ತಗೊಂಡಿದ್ದು, ಇದೀಗ ಯರಗೋಡಿ ಗ್ರಾಮದ ಸೇತುವೆ ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ. ಹೀಗಾಗಿ ನದಿ ಪಾತ್ರದಲ್ಲಿನ ಗ್ರಾಮಗಳಿಗೆ ಮುನ್ನೆಚ್ಚರಿಕೆ ಕ್ರಮವಾಗಿ ನದಿಗೆ ತೆರಳದಂತೆ ಮಾಹಿತಿ ನೀಡಲಾಗುತ್ತಿದೆ.
ಸಂಜೆಯ ವೇಳೆಗೆ ಕಲಬುರಗಿ-ರಾಯಚೂರು ಸಂಪರ್ಕ ಕಲ್ಪಿಸುವ ಸೇತುವೆ ಮುಳುಗಡೆಯಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಸದ್ಯ ಜಿಲ್ಲೆಯಲ್ಲಿ ದಿನ ದಿನಕ್ಕೆ ಜಲಾಶಯದ ಒಳಹರಿವಿನ ಪ್ರಮಾಣ ಹೆಚ್ಚಳವಾಗುವುದರ ಜೊತೆ ಕೃಷ್ಣಾ ನದಿ ಪಾತ್ರದಲ್ಲಿ ಪ್ರವಾಹ ಭೀತಿ ಹೆಚ್ಚಾಗುತ್ತಿರುವುದರಿಂದ ಜಿಲ್ಲಾಡಳಿತ ಸಹ ಮುಂಜಾಗ್ರತಾ ಕ್ರಮ ಕೈಗೊಂಡು ಹೈ ಅಲರ್ಟ್ ಘೋಷಣೆ ಮಾಡಿದೆ.
ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿ ಸಮೀಪದ ನಾಲೆಯಲ್ಲಿ ಒಡಕು ಉಂಟಾಗಿದ್ದು, ರೈತರ ಜಮೀನಿಗೆ ನೀರು ನುಗ್ಗುತ್ತಿದೆ. ಈ ಕುರಿತು ನೀರಾವರಿ ಅಧಿಕಾರಿಗಳ ಗಮನಕ್ಕೆ ತಂದರೂ, ಅಧಿಕಾರಿಗಳು ಮಾತ್ರ ಗಮನಹರಿಸುತ್ತಿಲ್ಲವೆಂದು ಅಧಿಕಾರಗಳ ವಿರುದ್ದ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.