ರಾಯಚೂರು:ರಾಜ್ಯದಲ್ಲಿ ಸಾಮಾನ್ಯವಾಗಿ ಬೇಸಿಗೆ ಸಮಯದಲ್ಲಿ ವಿದ್ಯುತ್ ಬೇಡಿಕೆ ಹೆಚ್ಚಳ ಇರುತ್ತದೆ. ಆದ್ರೆ ಬೇಸಿಗೆ ಆರಂಭಕ್ಕೂ ಮುನ್ನವೇ ರಾಜ್ಯದಲ್ಲಿ ವಿದ್ಯುತ್ ಬೇಡಿಕೆ ಹೆಚ್ಚಳವಾಗಿದೆ. ವಿದ್ಯುತ್ ಶಾಖೋತ್ಪನ್ನ ಕೇಂದ್ರಗಳ ಮೇಲೆ ಚಳಿಗಾಲದಲ್ಲಿ ವಿದ್ಯುತ್ ಉತ್ಪಾದಿಸುವ ಒತ್ತಡ ಹೆಚ್ಚಳವಾಗಿದೆ.
ಚಳಿಗಾಲವಿರುವಾಗಲೇ ರಾಜ್ಯದಲ್ಲಿ ವಿದ್ಯುತ್ ಬೇಡಿಕೆ ಅಧಿಕವಾಗಿದ್ದು 12 ಸಾವಿರ ಮೆಗಾವ್ಯಾಟ್ ಗಡಿದಾಟಿದೆ. ಬೇಸಿಗೆ ಸಮಯದಲ್ಲಿ ವಿದ್ಯುತ್ ಬೇಡಿಕೆ ಹೆಚ್ಚಳವಿರುವುದು ಸಾಮಾನ್ಯವಾಗಿ ಕಂಡು ಬರುತ್ತದೆ. ಆದ್ರೆ 2020ರ ವರ್ಷದ ಮೊದಲ ತಿಂಗಳ ಚಳಿಗಾಲ ನಡೆಯುತ್ತಿರುವಾಗಲೇ ಆರ್ಟಿಪಿಎಸ್ ಸೇರಿದಂತೆ ವಿದ್ಯುತ್ ಶಾಖೋತ್ಪನ್ನ ಕೇಂದ್ರಗಳಿಗೆ ಒತ್ತಡ ಹೆಚ್ಚಾಗಿದ್ದು, ಈ ಮೂಲಕ ಶಾಖೋತ್ಪನ್ನ ಕೇಂದ್ರಗಳು ನಿರಂತರ ವಿದ್ಯುತ್ ಉತ್ಪಾದನೆಯಲ್ಲಿ ತೊಡಗಿವೆ.
ರಾಜ್ಯದಲ್ಲಿ ಹೆಚ್ಚಿದ ವಿದ್ಯುತ್ ಬೇಡಿಕೆ ಇದೀಗ ಸೌರಶಕ್ತಿ, ಪವನಶಕ್ತಿ ಸೇರಿದಂತೆ ನಾನಾ ಮೂಲಗಳಿಂದ 6,583 ಮೆಗಾವ್ಯಾಟ್ ವಿದ್ಯುತ್ ದೊರೆಯುತ್ತಿದ್ದು, ಕೇಂದ್ರ ಜಾಲದಿಂದ 1,332 ಮೆಗಾವ್ಯಾಟ್ ವಿದ್ಯುತ್ ಸಿಗುತ್ತಿದೆ. ಇದರಿಂದ ಬೇಡಿಕೆ ಸರಿದೂಗಿಸಲು ಸಾಧ್ಯವಾಗುತ್ತಿದ್ದು, ಶಾಖೋತ್ಪನ್ನ ಮತ್ತು ಜಲಮೂಲದಿಂದ 3,800 ಮೆಗಾವ್ಯಾಟ್ವರೆಗೆ ವಿದ್ಯುತ್ ಲಭ್ಯವಾಗುತ್ತಿದೆ. ಜಲಮೂಲ ವಿದ್ಯುತ್ ಕೇಂದ್ರಗಳಾದ ಶರಾವತಿ, ನಾಗಝರಿ, ವರಾಹಿ, ಸೇರಿದಂತೆ ಜೋಗ್, ಸುಪಾ, ಶಿವನಸಮುದ್ರ ಸೇರಿದಂತೆ ಹಲವು ಜಲಮೂಲ ಕೇಂದ್ರಗಳಿಂದ ತಕ್ಕಮಟ್ಟಿಗೆ ವಿದ್ಯುತ್ ರಾಜ್ಯ ಜಾಲಕ್ಕೆ ಸೇರುತ್ತಿರುವುದರಿಂದ ಬೇಡಿಕೆ ಸರಿದೂಗಿಸಲು ತೊಂದರೆಯಾಗುತ್ತಿಲ್ಲ.
ಪ್ರಸ್ತುತ ಕಲ್ಲಿದ್ದಲ್ಲು ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳಾದ ಆರ್ಟಿಪಿಎಸ್ 7 ಘಟಕಗಳಿಂದ 1,357 ಮೆಗಾವ್ಯಾಟ್, ಬಿಟಿಪಿಎಸ್ನ 1 ಘಟಕದಿಂದ 431 ಮೆಗಾವಾಟ್ ವಿದ್ಯುತ್ ಉತ್ಪಾದಿಸಿ ರಾಜ್ಯ ವಿದ್ಯುತ್ ಜಾಲಕ್ಕೆ ರವಾನಿಸಲಾಗುತ್ತಿದೆ. ಇನ್ನೂ ಯುಪಿಸಿಎಲ್ನಿಂದಲೂ 292 ಮೆಗಾವ್ಯಾಟ್ ವಿದ್ಯುತ್ ದೊರೆಯುತ್ತಿದೆ.