ರಾಯಚೂರು:ಲಾಕ್ಡೌನ್ನಿಂದ ಮಾರ್ಚ್ ತಿಂಗಳ ಕೊನೆಯಲ್ಲಿ ಹಾಗೂ ಏಪ್ರಿಲ್, ಮೇ ತಿಂಗಳಲ್ಲಿ ಜಿಲ್ಲೆಯ ಜೀವ ನದಿಗಳಾಗಿರುವ ಕೃಷ್ಣ ಹಾಗೂ ತುಂಗಭದ್ರಾ ನದಿಯಲ್ಲಿ ಮರಳುಗಾರಿಕೆ ಸ್ಥಗಿತಗೊಳಿಸಲಾಗಿತ್ತು. ಆದರೂ ಕೂಡಾ ಕೊರೊನಾ ಲಾಕ್ಡೌನ್ ಮಧ್ಯೆ ಇಲ್ಲಿ ಎಗ್ಗಿಲ್ಲದೆ ಮರಳುಗಾರಿಕೆ ನಡೆದಿದೆ.
ಜಿಲ್ಲೆಯ ಜೀವ ನದಿಗಳಾಗಿರುವ ಕೃಷ್ಣ, ತುಂಗಭದ್ರಾ ನದಿಗಳು ವಿಶಾಲವಾಗಿ ಹರಿಯುವುದರಿಂದ ಮರಳು ಯಥೇಚ್ಛವಾಗಿ ದೊರೆಯುತ್ತದೆ. ನದಿಯಲ್ಲಿ ಮರಳುಗಾರಿಕೆಯಿಂದ ಸರ್ಕಾರಕ್ಕೆ ಪ್ರತಿ ವರ್ಷ ಕೋಟ್ಯಂತರ ರೂಪಾಯಿ ರಾಜಧನ ಸಂಗ್ರಹವಾಗುತ್ತದೆ. ಲಾಕ್ಡೌನ್ ಸಂದರ್ಭ ಮರಳುಗಾರಿಕೆಯನ್ನು ಸ್ಥಗಿತಗೊಳಿಸಿದ್ದರೂ, ಈ ಎರಡು ನದಿಗಳಲ್ಲಿ ಅಕ್ರಮ ಮರಳುಗಾರಿಕೆ ನಡೆದಿದೆ.
ಕೃಷ್ಣ, ತುಂಗಭದ್ರಾ ನದಿಗಳಿಗೆ ಒಟ್ಟು 38 ಬ್ಲಾಕ್ಗಳನ್ನ ಗುರುತಿಸಲಾಗಿದೆ. ಇದರಲ್ಲಿ 27 ಬ್ಲಾಕ್ಗಳಲ್ಲಿ ಮರಳುಗಾರಿಕೆಗೆ ಅನುಮತಿ ನೀಡಲಾಗಿದೆ. ನಿಯಮ ಪ್ರಕಾರ ರಾಜಧನ ಪಾವತಿಯಾಗಿ ನಿಗದಿತ ಸಮಯದಲ್ಲಿ ಮರಳುಗಾರಿಕೆ ನಡೆಸಬೇಕು. ಆದ್ರೆ ಮರಳು ಹೇರಳವಾಗಿ ದೊರೆಯುವುದರಿಂದ ಅಕ್ರಮ ಮರಳುಗಾರಿಕೆ ಮಾಡಿ, ಎಗ್ಗಿಲ್ಲದೆ ಮರಳು ಸಾಗಾಣಿಕೆ ಮಾಡುತ್ತಿರುವ ಆರೋಪದ ಮೇಲೆ 2019ರಲ್ಲಿ ಜಿಲ್ಲೆಯಲ್ಲಿ ಒಟ್ಟು 205 ಪ್ರಕರಣಗಳು ದಾಖಲಿಸಲಾಗಿದೆ. ಅಲ್ಲದೆ 464 ಆರೋಪಿಗಳನ್ನ ದಸ್ತಗಿರಿ ಮಾಡಲಾಗಿದೆ. 71 ಲಾರಿ/ಟಿಪ್ಪರ್,159 ಟ್ರಾಕ್ಟರ್, ಕ್ರಷರ್, 4 ಜೆಸಿಬಿ ವಶಕ್ಕೆ ಪಡೆದು 1,05,49,270 ರೂಪಾಯಿ ಮೌಲ್ಯದ ಮರಳನ್ನ ಜಪ್ತಿ ಮಾಡಲಾಗಿತ್ತು.