ರಾಯಚೂರು:ಪ್ರಧಾನಿ ನರೇಂದ್ರ ಮೋದಿ ಅವರು ಹೆಚ್ ಡಿ ಕುಮಾರಸ್ವಾಮಿ ಅವರನ್ನು ಒಂದು ವೇಳೆ ಕೇಂದ್ರ ಸಚಿವರಾಗಿ ಮಾಡುತ್ತೇನೆ ಅಂತ ಹೇಳಿದ್ರೆ ಸಂತೋಷದ ವಿಷಯ ಎಂದು ಮಾಜಿ ಡಿಸಿಎಂ ಕೆ ಎಸ್ ಈಶ್ವರಪ್ಪ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ವೇಳೆ ಹಾಗೇನಾದರೂ ಹೇಳಿದರೆ, ರಾಜ್ಯಕ್ಕೂ ದೇಶಕ್ಕೂ ಒಳ್ಳೆಯದಾಗುತ್ತೆ. ಹೆಚ್‌ಡಿಕೆ ಅವರು ಮಾಜಿ ಪ್ರಧಾನಿ ದೇವೆಗೌಡರ ಪುತ್ರ, ಹೆಚ್ ಡಿ ದೇವೆಗೌಡರು ಹಾಗೂ ಬಿ.ಎಸ್.ಯಡಿಯೂರಪ್ಪ ಅವರು ರೈತರಿಗಾಗಿ ಹೆಚ್ಚು ಓಡಾಡಿ, ಕೆಲಸ ಮಾಡಿದ್ದಾರೆ. ದೇವೇಗೌಡರ ಮಾರ್ಗದರ್ಶನದಲ್ಲಿ ಕುಮಾರಸ್ವಾಮಿ ರಾಜ್ಯದಲ್ಲಿ ಒಳ್ಳೆಯ ಆಡಳಿತ ನೀಡಿದ್ದಾರೆ.
ಬಿಜೆಪಿ ಹಾಗೂ ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲೂ ಒಳ್ಳೆಯ ಹೆಸರು ಬಂದಿದೆ. ಮತ್ತೆ ಬಿಜೆಪಿ ಗೆಲ್ಲಲು ಸಮ್ಮಿಶ್ರ ಸರ್ಕಾರದ ಸಾಧನೆ ಕೂಡ ಕಾರಣ, ಬಿಜೆಪಿ ಬೆಳವಣಿಗೆಯಾಯ್ತು, ಕುಮಾರಸ್ವಾಮಿ ಎನ್‌ಡಿಎ ಸೇರುವುದಕ್ಕೆ ಈಗಾಗಲೇ ಸ್ವಾಗತ ಮಾಡಿದ್ದೇವೆ. ಇದರಿಂದ ರಾಜ್ಯದ ರೈತರಿಗೆ ಹೆಚ್ಚು ಸಂತೋಷವಾಗುತ್ತೆ, ಮೋದಿಯವರು ಕೇಂದ್ರ ಮಂತ್ರಿ ಮಾಡುತ್ತೇನೆ ಅಂತ ಹೇಳಿದ್ದರೆ ಇನ್ನೂ ಸಂತೋಷ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸೋಮಶೇಖರ್, ಹೆಬ್ಬಾರ್ ವಿರುದ್ಧ ಕಿಡಿ: ಬಿಜೆಪಿ ಅಲ್ಲಿ ಇರೋ ಹಾಗಿದ್ದರೆ ಇರ್ರೀ, ಇಲ್ಲವೇ ಹೋಗಿ ಅಂತ ಪಕ್ಷ ತೊರೆಯುವ ನಾಯಕರಿಗೆ ಎಚ್ಚರಿಕೆ ನೀಡಿದರು. ಚುನಾವಾಣೆಯಲ್ಲಿ ನಿಲ್ಸಿ, ಗೆಲ್ಸಿ ಮಂತ್ರಿ ಮಾಡಾಯ್ತು. ಈಗ ಮತ್ತೆ ಗೆದ್ದಾಯ್ತು. ಈಗ ಸಿಎಂ ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ಬಗ್ಗೆ ಒಲವು ಇದ್ದರೆ, ಕಾಂಗ್ರೆಸ್ ಬಗ್ಗೆ ಒಲವು ಆಗಿದೆಯಾ ?, ತಾಳಿ ಒಬ್ಬರಿಂದ ಕಟ್ಟಿಸಿಕೊಂಡು ಸಂಸಾರ ಮತ್ತೊಬ್ಬರ ಜೊತೆ ಮಾಡಬಾರದು ಎಂದು ಶಾಸಕ ಎಸ್ ಟಿ ಸೋಮಶೇಖರ್ ಹಾಗೂ ಹೆಬ್ಬಾರ್ ವಿರುದ್ಧ ಕಿಡಿಕಾರಿದರು.
ಜ್ಞಾನವ್ಯಾಪಿ ಸಮೀಕ್ಷೆ: ಜ್ಞಾನವ್ಯಾಪಿ ವೈಜ್ಞಾನಿಕ ಸಮೀಕ್ಷೆಗೆ ಮುಸ್ಲಿಂ ಸಮುದಾಯ ಸಲ್ಲಿಸಿದ್ದ ಅರ್ಜಿ ವಜಾ ವಿಚಾರಕ್ಕೆ ಪ್ರತಿಕ್ರಿಯೆಸಿದ ಅವರು, ಎರಡು ಕನಸು ಈಗ ಈಡೇರಿದೆ. ಆಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ, ಆರ್ಟಿಕಲ್ 370 ರದ್ದುಗೊಳಿಸಲಾಗಿದೆ. ಕಾಶಿ ವಿಶ್ವನಾಥನ ಸರ್ವೇ ರಿಪೋರ್ಟ್ ಬಂದಿದೆ. ಸ್ವಾತಂತ್ರ್ಯ ಬಂದ ಮೇಲೆ ಮುಸಲ್ಮಾನರು ಹೊಸ ಮಸೀದಿ ಕಟ್ಟಿಕೊಂಡು ನಮಾಜ್ ಮಾಡ್ತಿದ್ದಾರೆ ಅದಕ್ಕೆ ಗೌರವ ಕೊಡುತ್ತೇವೆ ಎಂದರು.
ಯತ್ನಾಳ್ ಹೇಳಿಕೆಯಿಂದ ಪಕ್ಷಕ್ಕೆ ಡ್ಯಾಮೇಜ್ :ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಸ್ವಪಕ್ಷದ ವಿರುದ್ಧ ಹೇಳಿಕೆ ವಿಚಾರಕ್ಕೆ ಮಾತನಾಡಿದ ಅವರು, ಬಿಜೆಪಿ ಪಕ್ಷ ಆನೆ ಇದ್ದಂತೆ, ಗಜ ಗಾಂಭೀರ್ಯದಿಂದ ಹೋಗುವಾಗ ನಾಯಿ ನರಿಗಳು ಬೊಗಳುತ್ತವೆ. ಯತ್ನಾಳ್ ಅವರದ್ದೇನು ಹೊಸದಲ್ಲ, ಯಾರನ್ನು ಬಿಟ್ಟಿದ್ದಾರೆ, ಬಿ ಎಸ್ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಜಗದೀಶ ಶೆಟ್ಟರ್ ಅವರನ್ನೇ ಬಿಟ್ಟಿಲ್ಲ, ಅವರ ಹೇಳಿಕೆಯಿಂದ ಪಕ್ಷಕ್ಕೆ ಡ್ಯಾಮೇಜ್ ಆಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.