ರಾಯಚೂರು: ಕಳೆದ ಆಗಸ್ಟ್, ಸೆಪ್ಟೆಂಬರ್ ತಿಂಗಳಲ್ಲಿ ಸುರಿದ ಭಾರೀ ಮಳೆಗೆ ಜಿಲ್ಲೆಯ ಹಲವು ಗ್ರಾಮಗಳು ಜಲಾವೃತವಾಗಿ ಜನಜೀವನ ಅಸ್ತವ್ಯಸ್ತವಾಗಿತ್ತು.
2 ತಿಂಗಳಿನಿಂದ ಶಾಲೆಯಲ್ಲಿ ತಂಗಿರುವ ಗ್ರಾಮಸ್ಥರು: ಶಾಶ್ವತ ಸೂರು, ಬೆಳೆ ನಷ್ಟ ಪರಿಹಾರಕ್ಕೆ ಆಗ್ರಹ
ಭಾರೀ ಮಳೆಯಿಂದ ತಮ್ಮದೆಲ್ಲವನ್ನು ಕಳೆದುಕೊಂಡ ರಾಯಚೂರಿನ ಇಡಪನೂರು ಗ್ರಾಮಸ್ಥರು ಕಳೆದ ಒಂದೂವರೆ ತಿಂಗಳಿನಿಂದ ಸ್ಥಳೀಯ ಶಾಲೆಯಲ್ಲಿ ಆಶ್ರಯ ಪಡೆದಿದ್ದು, ಸರ್ಕಾರದಿಂದ ಸೂಕ್ತ ಪರಿಹಾರದ ನಿರೀಕ್ಷೆಯಲ್ಲಿದ್ದಾರೆ.
ರಾಯಚೂರು ತಾಲೂಕಿನ ಇಡಪನೂರು ಗ್ರಾಮ ಸೇರಿದಂತೆ ಹಲವೆಡೆ ಮಳೆಯಿಂದ ನೂರಾರು ಮನೆಗಳು ಕುಸಿದಿವೆ. ಸಾವಿರಾರು ಎಕರೆ ಕೃಷಿ ಹಾನಿಯಾಗಿದೆ. ಇಡಪನೂರು ಗ್ರಾಮದಲ್ಲಿ ಮನೆ ಕಳೆದುಕೊಂಡವರಿಗೆ ಜಿಲ್ಲಾಡಳಿತ ಸ್ಥಳೀಯ ಶಾಲೆಯಲ್ಲಿ ತಾತ್ಕಾಲಿಕ ವಸತಿ ವ್ಯವಸ್ಥೆ ಕಲ್ಪಿಸಿದೆ. ಹೀಗಾಗಿ ಗ್ರಾಮಸ್ಥರು ಎರಡು ಮೂರು ತಿಂಗಳಿನಿಂದ ಶಾಲೆಯಲ್ಲೇ ವಾಸ್ತವ್ಯ ಹೂಡಿದ್ದಾರೆ.
ಆರಂಭದಲ್ಲಿ ಎರಡು ಸಲ ಆಹಾರ ಸಾಮಗ್ರಿ ಕಿಟ್ ವಿತರಿಸಿದ ಜಿಲ್ಲಾಡಳಿತ, ಮನೆ ಕಟ್ಟಿಕೊಡುವ ಭರವಸೆ ನೀಡಿ ಕೈ ತೊಳೆದುಕೊಂಡಿದೆ. ಆ ಬಳಿಕ ಇತ್ತ ಕಡೆ ಯಾರೂ ತಲೆ ಹಾಕಿಲ್ಲ. ಕನಿಷ್ಠ ಪಕ್ಷ ಶೆಡ್ ಹಾಕಿಕೊಡುವ ವ್ಯವಸ್ಥೆಯನ್ನೂ ಮಾಡಿಲ್ಲ. ಆದ್ದರಿಂದ ನಮಗೆ ಇರಲು ಮನೆ ಬೇಕು, ಹಾನಿಯಾದ ಬೆಳೆಗೆ ಪರಿಹಾರ ನೀಡಬೇಕು ಎಂದು ನಿರಾಶ್ರಿತ ಗ್ರಾಮಸ್ಥರು ಆಗ್ರಹಿಸಿದ್ದಾರೆ.