ರಾಯಚೂರು: ನನಗೆ ಕಾಂಗ್ರೆಸ್ ನಾಯಕರಿಂದ ಯಾವುದೇ ಆಹ್ವಾನ ಬಂದಿಲ್ಲ. ಊಹಾಪೋಹಗಳು ಕೇಳಿ ಬರುತ್ತವೆ. ಅವೆಲ್ಲದಕ್ಕೂ ನಾನು ಉತ್ತರ ಕೊಡಲ್ಲ ಎಂದು ಮಾಜಿ ಸಂಸದ ಬಿ.ವಿ.ನಾಯಕ್ ಸ್ಪಷ್ಟಪಡಿಸಿದ್ದಾರೆ. ರಾಯಚೂರು ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿ, ಸಂಸದ ಡಿ.ಕೆ.ಸುರೇಶ್ ಹಾಗೂ ಬಿ.ವಿ.ನಾಯಕ್ ಅವರು ಭೇಟಿಯಾಗಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದರ ಬಗ್ಗೆ ಪ್ರತಿಕ್ರಿಯಿಸಿ, ಅದು ಹಳೇ ಫೋಟೋ ಎಂದರು.
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಆಪರೇಷನ್ ಹಸ್ತ ವಿಚಾರಕ್ಕೆ, ರಾಜಕೀಯದಲ್ಲಿ ಚುನಾವಣೆ ಬಂದಾಗ ಧ್ರುವೀಕರಣ ಸಾಮಾನ್ಯ ಎಂದರು. ಇದೇ ವೇಳೆ, ಡಿ.ಕೆ.ಸುರೇಶ್ ಹಾಗೂ ನಾನು ಸ್ನೇಹಿತರು ಬೆಂಗಳೂರಿಗೆ ಹೋದಾಗ ನಾನು, ಅವರು ಭೇಟಿಯಾಗುತ್ತಿರುತ್ತೇವೆ. ಅವರ ಜೊತೆಗಿನ ಫೋಟೋ ಹಳೆಯದು. ಇತ್ತೀಚೆಗೆ ನಾನು ಅವರನ್ನು ಭೇಟಿಯಾಗಿಲ್ಲ. ಚುನಾವಣೆ ಸಮಯದಲ್ಲಿ ಏನಾದರೂ ಆಗಬಹುದು ಎಂದು ತಿಳಿಸಿದರು.
ವೆಂಕಟಪ್ಪ ನಾಯಕ್‌ರನ್ನು ಭೇಟಿಯಾದಾಗಲೂ ರಾಜಕೀಯದ ಕುರಿತು ಮಾತಾಡಿಲ್ಲ. ರಾಜಕೀಯ ಬಿಟ್ಟು ಬೇರೆ ವಿಷಯ ಮಾತನಾಡಿದ್ದೇವೆ ಅಷ್ಟೆ. ಸದ್ಯಕ್ಕೆ ನಾನು ಯಾವುದೇ ಚುನಾವಣೆಗೆ ರೆಡಿ ಇಲ್ಲ. ಮೊನ್ನೆ ತಾನೇ ವಿಧಾನಸಭಾ ಚುನಾವಣೆ ಎದುರಿಸಿದ್ದೇನೆ. ಮತ್ತೆ ಮತ್ತೆ ಚುನಾವಣೆ ಎದುರಿಸುವಂತಹ ಆಸಕ್ತಿ ಇಲ್ಲ, ಮುಂದೆ ನೋಡೋಣ ಎಂದು ಹೇಳಿದರು.