ಕರ್ನಾಟಕ

karnataka

ETV Bharat / state

ರಾಯಚೂರು: ಕುಡಿದ ಮತ್ತಿನಲ್ಲಿ ಪತ್ನಿ ಕೊಂದು ಪತಿ ಆತ್ಮಹತ್ಯೆ - Housewife suicide case

ಕುಡಿದ ಮತ್ತಿನಲ್ಲಿ ಪತ್ನಿಯ ಕೊಲೆ ಮಾಡಿದ ಪತಿ ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಾನವಿ ತಾಲೂಕಿನ ರಾಜೋಳ್ಳಿ ಗ್ರಾಮದಲ್ಲಿ ನಡೆದಿದೆ. ಹುಬ್ಬಳ್ಳಿ ಸಮೀಪದ ಬೋಗೆನಾಗರಕೊಪ್ಪದಲ್ಲಿ ಗೃಹಿಣಿಯೊಬ್ಬಳು‌ ಆತ್ಮಹತ್ಯೆ ಮಾಡಿಕೊಂಡ ಘಟನೆ ಕೂಡ ನಡೆದಿದೆ.

ರಾಯಚೂರು ಪತಿ ಮತ್ತು ಪತ್ನಿಯ ಸಾವು ಪ್ರಕರಣ
ರಾಯಚೂರು ಪತಿ ಮತ್ತು ಪತ್ನಿಯ ಸಾವು ಪ್ರಕರಣ

By ETV Bharat Karnataka Team

Published : Sep 23, 2023, 8:13 PM IST

ರಾಯಚೂರು:ಪತ್ನಿಯನ್ನು ಕೊಲೆ ಮಾಡಿದ ಬಳಿಕ ಪತಿಯೂ ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ರಾಯಚೂರು ಜಿಲ್ಲೆಯ ಮಾನವಿ ತಾಲೂಕಿನ ರಾಜೋಳ್ಳಿ ಗ್ರಾಮದಲ್ಲಿ ಸಂಭವಿಸಿದೆ. ಪತ್ನಿ ಅಂಬಮ್ಮ(32) ಕೊಲೆಗೀಡಾದರೆ, ಪತಿ ಖಾಸಿಂಪ ನಾಯಕ (35) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.

ಖಾಸಿಂಪ ಶುಕ್ರವಾರ ಕುಡಿದ ಮತ್ತಿನಲ್ಲಿ ಪತ್ನಿ ಅಂಬಮ್ಮಳ ಮೇಲೆ ಕಲ್ಲನ್ನು ಎತ್ತಿ ಹಾಕಿ ಕೊಲೆ ಮಾಡಿದ್ದಾನೆ ಎಂದು ಮೃತಳ‌ ತಾಯಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆದರೆ, ದೂರು ದಾಖಲಾಗುತ್ತಿದ್ದಂತೆ ಆರೋಲಿ ಗ್ರಾಮದ ಸೀಮಾಂತರದಲ್ಲಿ ಬರುವ ಹೊಲದಲ್ಲಿ ಖಾಸಿಂಪ ಇಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಅಂಬಮ್ಮಳನ್ನು ಕಳೆದ 14 ವರ್ಷಗಳ ಹಿಂದೆ ಖಾಸಿಂಪ ನಾಯಕನಿಗೆ ಕೊಟ್ಟು ಮದುವೆ ಮಾಡಿಕೊಡಲಾಗಿತ್ತು. ಅವರಿಗೆ ಇದೀಗ ಇಬ್ಬರು ಮಕ್ಕಳಿದ್ದಾರೆ. ಕುಟುಂಬದ ನಿರ್ವಹಣೆ ಮಾಡಬೇಕಾದ ಪತಿ ಕುಡಿತದ ಚಟಕ್ಕೆ ಬಿದ್ದಿದ್ದರಿಂದ ಪತ್ನಿ ಅಂಬಮ್ಮ ಕೂಲಿ ನಾಲಿ ಮಾಡಿ ಕುಟುಂಬ ನಡೆಸುತ್ತಿದ್ದಳು. ಕುಡಿದ ಮತ್ತಿನಲ್ಲಿ ಕೊಲೆ ಮಾಡಿದ ಖಾಸಿಂಪ ಸ್ಥಳದಿಂದ ಪರಾರಿಯಾಗಿದ್ದ. ಸುದ್ದಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದ್ದರು. ಈ ಬಗ್ಗೆ ಮೃತಳ‌ ತಾಯಿ ಮಾನವಿ ಪೊಲೀಸ್ ಠಾಣೆಗೆ ದೂರು ಸಹ ನೀಡಿದ್ದರು.

ದೂರಿನ‌ ಆಧಾರದ ಮೇಲೆ ಪೊಲೀಸರು ತನಿಖೆ ಕೈಗೊಂಡು‌ ಆರೋಪಿಯನ್ನು ಸೆರೆ ಹಿಡಿಯುವುದಕ್ಕೆ ಮುಂದಾಗಿದ್ದರು. ಆದರೆ, ಕೃತ್ಯವೆಸಗಿ ಪರಾರಿಯಾಗಿದ್ದ ಪತಿ ಖಾಸಿಂಪ, ಭಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ. ಪತ್ನಿಯ ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ತಂದೆ-ತಾಯಿ ಸಾವಿನಿಂದ ಇಬ್ಬರು ಮಕ್ಕಳು ಅನಾಥರಾಗಿದ್ದು ಈ ಬಗ್ಗೆ ಮಾನವಿ ಪೊಲೀಸ್​ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.

ಗೃಹಿಣಿ ಆತ್ಮಹತ್ಯೆ: ಗೃಹಿಣಿಯೊಬ್ಬಳು‌ ಆತ್ಮಹತ್ಯೆ ಮಾಡಿಕೊಂಡ ಘಟನೆ ಹುಬ್ಬಳ್ಳಿ ಸಮೀಪದ ಕಲಘಟಗಿ ತಾಲೂಕಿನ‌ ಬೋಗೆನಾಗರಕೊಪ್ಪ ಗ್ರಾಮದಲ್ಲಿ ನಡೆದಿದೆ. ಸುಮಂಗಲಾ ಸಾವನ್ನಪ್ಪಿದ ಮಹಿಳೆ. ಶುಕ್ರವಾರ ಗಂಡನ ಮನೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿದ್ದ ಸುಮಂಗಲಾ ತಿಪ್ಪಣ್ಣವರ್ ಶವ ಪತ್ತೆಯಾಗಿದೆ.‌ ಆದರೆ, ಗಂಡನ ಮನೆಯವರು ವರದಕ್ಷಿಣೆ ಕಿರುಕುಳ ನೀಡಿದ್ದರಿಂದಲೇ ತಮ್ಮ ಮಗಳು ಸುಮಂಗಲಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಮೃತ ಮಹಿಳೆಯ ಸಂಬಂಧಿಕರು ಆರೋಪಿಸಿದ್ದಾರೆ.

ಕಳೆದ 5 ವರ್ಷಗಳ‌ ಹಿಂದೆ ಪ್ರವೀಣ್ ತಿಪ್ಪಣ್ಣವರ್ ಎಂಬುವರಿಗೆ ಸುಮಂಗಲಾ ಅವರನ್ನು ಮದುವೆ ಮಾಡಿಕೊಡಲಾಗಿತ್ತು. ಅವರು ಹೇಳಿದಂತೆ ಮದುವೆ ಮಾಡಿಕೊಟ್ಟರೂ ಗಂಡನ ಮನೆಯವರಿಂದ ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದರು.‌ ಹೀಗಾಗಿ ಅವರೇ ನಮ್ಮ ಮಗಳನ್ನು ಕೊಲೆ ಮಾಡಿ ನೇಣು ಹಾಕಿದ್ದಾರೆ ಎಂದು ಮೃತಳ‌ ಸಂಬಂಧಿಗಳು ಆರೋಪಿಸಿದ್ದಾರೆ. ಸುಮಂಗಲಾ ಸಾವಿನ ಬೆನ್ನಲ್ಲೇ ಪತಿ ಪ್ರವೀಣ್ ಕುಟುಂಬದವರು ಪರಾರಿಯಾಗಿರುವುದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ.‌ ಈ ಸಂಬಂಧ ಕಲಘಟಗಿ ಪೊಲೀಸ್ ಠಾಣೆಯಲ್ಲಿ ‌ಪ್ರಕರಕ ದಾಖಲಾಗಿದ್ದು, ಆರೋಪಿಗಳ ಪತ್ತೆಗಾಗಿ ಕಲಘಟಗಿ ಪೊಲೀಸರು ಬಲೆ ಬೀಸಿದ್ದಾರೆ.

ಇದನ್ನೂ ಓದಿ:ಪತ್ನಿ ಜೊತೆ ಸಂಬಂಧ ಶಂಕೆ: ವ್ಯಕ್ತಿಯ ಶಿರಚ್ಛೇದ... ಕತ್ತರಿಸಿದ ತಲೆ ಹಿಡಿದು ಪತ್ನಿಯ ತವರು ಮನೆಗೆ ಬಂದ ಪತಿ!

ABOUT THE AUTHOR

...view details