ರಾಯಚೂರು: ರಾಜ್ಯ ವಿಧಾನಸಭಾ ಚುನಾವಣೆ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಸದ್ಯಕ್ಕೆ ನಾಮಪತ್ರ ಸಲ್ಲಿಕೆ ಕಾರ್ಯ ಬಿರುಸುಗೊಂಡಿದೆ. ಇದೀಗ ರಾಯಚೂರು ಜಿಲ್ಲೆಯಲ್ಲಿ ಒಂದೇ ಕ್ಷೇತ್ರಕ್ಕೆ ಗಂಡ ಹೆಂಡತಿ ಇಬ್ಬರೂ ನಾಮಪತ್ರ ಸಲ್ಲಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಜನಾರ್ದನ್ ರೆಡ್ಡಿಯವರ ಕೆಆರ್ಪಿಪಿ ಅಭ್ಯರ್ಥಿಯಾಗಿ ಪತಿ ನಾಮಪತ್ರ ಸಲ್ಲಿಸಿದ್ರೆ, ಪಕ್ಷೇತರ ಅಭ್ಯರ್ಥಿಯಾಗಿ ಪತ್ನಿ ಉಮೇದುವರಿಕೆ ಸಲ್ಲಿಸಿದ್ದಾರೆ.
ಹೌದು, ರಾಯಚೂರು ಜಿಲ್ಲೆಯ ಸಿಂಧನೂರು ವಿಧಾನಸಭಾ ಕ್ಷೇತ್ರದಲ್ಲಿ ಪತಿ, ಪತ್ನಿ ಇಬ್ಬರು ನಾಮಪತ್ರ ಸಲ್ಲಿಸುವ ಮೂಲಕ ಒಬ್ಬರಿಗೊಬ್ಬರು ಎದುರಾಳಿಗಳಾಗಲಿದ್ದಾರೆ. ಕಲ್ಯಾಣ ರಾಜ್ಯ ಪ್ರಗತಿ ಪಕ್ಷದಿಂದ ಪತಿ ಮಲ್ಲಿಕಾರ್ಜುನ ನೆಕ್ಕಂಟಿ ಅಭ್ಯರ್ಥಿಯಾಗಿ ನಾಮಪತ್ರವನ್ನು ಸಲ್ಲಿಸಿದ್ದಾರೆ. ಮತ್ತೊಂದು ಕಡೆ, ಪತ್ನಿ ಎನ್. ರಮ್ಯಾ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣಾಧಿಕಾರಿಗೆ ನಾಮಿನೇಷನ್ ಸಲ್ಲಿಸಿದ್ದಾರೆ. ಈ ಮೂಲಕ ಸತಿ - ಪತಿ ಇಬ್ಬರು ಪರಸ್ಪರಗೆ ಸ್ಪರ್ಧೆಗೆ ಇಳಿದಿದ್ದಾರೆ.
ನಾಮಪತ್ರ ಸಲ್ಲಿಕೆಗೆ ಮುನ್ನ ಮಲ್ಲಿಕಾರ್ಜುನ ನೆಕ್ಕಂಟಿ ಪಟ್ಟಣದಲ್ಲಿ ಬೃಹತ್ ಮೆರವಣಿಗೆಯೊಂದಿಗೆ ತಹಶೀಲ್ದಾರ್ ಕಚೇರಿಗೆ ಆಗಮಿಸಿ ತಮ್ಮ ಉಮೇದುವರಿಕೆಯನ್ನು ಸಲ್ಲಿಸಿದರು. ವಿಶೇಷ ಅಂದ್ರೆ, ಪತಿಯ ವಾಹನದಲ್ಲೇ ಬಂದಂತಹ ಪತ್ನಿ ಎನ್.ರಮ್ಯಾ ಗಂಡನೊಂದಿಗೆ ನಾಮಪತ್ರವನ್ನು ಸಲ್ಲಿಸಲು ತೆರಳಲಿಲ್ಲ. ಬದಲಾಗಿ, ಪತಿ ನಾಮಪತ್ರ ಸಲ್ಲಿಸಿದ ನಂತರ ಅವರು ಪ್ರತೇಕ್ಯವಾಗಿ ತೆರಳಿ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.
ಇದನ್ನೂ ಓದಿ :ಎತ್ತಿನಗಾಡಿಯಲ್ಲಿ ಬಂದು ನಾಮಪತ್ರ ಸಲ್ಲಿಸಿದ ಸೊರಬ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಚಿದಾನಂದಗೌಡ