ರಾಯಚೂರು: ಕೃಷಿ ಅಂದ್ರೆ ಸಾಕು, ಮೂಗು ಮುರಿಯುವವರೇ ಹೆಚ್ಚು. ಆದ್ರೆ, ಇಲ್ಲೋರ್ವ ಯುವತಿ ತನ್ನ ತಂದೆ ಮೃತಪಟ್ಟಿದ್ದಕ್ಕೆ ವಿದ್ಯಾಭ್ಯಾಸ ಬದಿಗಿಟ್ಟು ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾಳೆ. ಹೀಗೆ ಟ್ರ್ಯಾಕ್ಟರ್ನಿಂದ ಹೊಲ ಉಳುಮೆ ಮಾಡುತ್ತಿರುವ ಯುವತಿಯ ಹೆಸರು ಹುಲಿಗೆಮ್ಮ. ಸಿರವಾರ ತಾಲೂಕಿನ ಜಕ್ಕಲದಿನ್ನಿ ಗ್ರಾಮದ ನಿವಾಸಿ. ಬಿಎ ಮೊದಲ ವರ್ಷ ಮುಗಿಸಿ ಎರಡನೇ ವರ್ಷಕ್ಕೆ ಕಾಲಿಡಬೇಕಿತ್ತು. ಆ ಸಮಯದಲ್ಲಿ ಆಕೆಯ ತಂದೆ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ಆ ವೇಳೆ ದಿಕ್ಕು ತೋಚದ ಹುಲಿಗೆಮ್ಮ ಸ್ವತಃ ತಾನೇ ಸಂಸಾರದ ಹೊಣೆ ಹೊತ್ತು, ವ್ಯವಸಾಯ ಮಾಡುತ್ತಿದ್ದಾಳೆ.
ಕೃಷಿ ಚಟುವಟಿಕೆಗೆ ಸಂಬಂಧಿಸಿದ ಪ್ರತಿಯೊಂದು ಕೆಲಸವನ್ನೂ ತನ್ನ ತಂದೆಯಿಂದ ನೋಡಿ ಕಲಿತಿರುವ ಹುಲಿಗೆಮ್ಮ, ತಮ್ಮ ಮೂರು ಎಕರೆ ಜಮೀನಿನ ಜತೆಗೆ ಇತರರ 15 ಎಕರೆ ಭೂಮಿಯನ್ನು ಸಹ ಲೀಸ್ಗೆ ಪಡೆದಿದ್ದಾಳೆ. ಮುಂಗಾರು ಆರಂಭವಾಗಿರುವುದರಿಂದ ಬಿತ್ತನೆ ಕಾರ್ಯಕ್ಕೆ ಜಮೀನನ್ನು ಹದಗೊಳಿಸುತ್ತಿದ್ದಾಳೆ.
ಅವರ ತಂದೆ ಪಾರ್ಶ್ವವಾಯುವಿಗೆ ತುತ್ತಾಗಿ ಮೃತಪಟ್ಟಾಗ, ಮೂವರು ಮಕ್ಕಳು ಇನ್ನೂ ಓದುತ್ತಿದ್ದರು. ಆದರೆ, ಮನೆಯ ಆರ್ಥಿಕ ಪರಿಸ್ಥಿತಿ ಹದಗೆಟ್ಟ ಹಿನ್ನೆಲೆ, ಎಲ್ಲರಿಗಿಂತ ಕಿರಿಯಳಾದ ಹುಲಿಗೆಮ್ಮ ಅರ್ಧಕ್ಕೆ ಓದು ನಿಲ್ಲಿಸಿ ಕುಟುಂಬ ನಿರ್ವಹಣೆಗೆ ನಿಂತಳು. ನನ್ನ ತಂಗಿ ಅವಳ ಓದನ್ನು ನಿಲ್ಲಿಸಿ ನನಗೆ ವಿದ್ಯೆ ಕೊಡಿಸಿದ್ದಾಳೆ ಎಂದು ಅಕ್ಕ ಈರಮ್ಮ ಸಂತಸ ವ್ಯಕ್ತಪಡಿಸುತ್ತಾರೆ.