ರಾಯಚೂರು:ದುಬಾರಿ ದುನಿಯಾದಲ್ಲಿ ಮನೆ ಕಟ್ಟುವುದೆಂದರೆ ಅಷ್ಟು ಸುಲಭದ ಮಾತಲ್ಲ. ಕಟ್ಟಿರುವ ಮನೆಯನ್ನು ಕೆಡವಿ ಮತ್ತೆ ಲಕ್ಷಾಂತರ ರೂಪಾಯಿ ವ್ಯಯಿಸಿ ಮನೆ ನಿರ್ಮಾಣ ಮಾಡುವುದು ಸಹ ಕಷ್ಟದ ಮಾತೇ. ಆದರೆ, ಇಲ್ಲೊಬ್ಬರು ತಮ್ಮ ಹಳೆಯ ಮನೆ ಕೆಡವಿ ಸನ್ನಿವೇಶ ಎದುರಾದರೂ ಬದಲಿ ವ್ಯವಸ್ಥೆ ಕಂಡುಕೊಂಡು ಲಕ್ಷಾಂತರ ಹಣ ಉಳಿಸುವ ಜೊತೆಗೆ ವಿಭಿನ್ನ ಕಾರ್ಯ ಮಾಡಲು ಮುಂದಾಗಿದ್ದಾರೆ.
ರಾಯಚೂರು ನಗರದ ನಿವಾಸಿ ಸತ್ಯನಾರಾಯಣ ತಮ್ಮ ಮನೆಗೆ ಎದುರಾಗಿರುವ ಅಡಚಣೆಯನ್ನು ಆಧುನಿಕ ತಂತ್ರಜ್ಞಾನದ ಮೂಲಕ ದೂರಮಾಡಿಕೊಂಡಿದ್ದಾರೆ. ಹಳೆ ಮನೆಯನ್ನು 4 ಅಡಿಗಳಷ್ಟು ಮೇಲೆತ್ತುವ ಸಾಹಸಕ್ಕೆ ಕೈಹಾಕಿದ್ದಾರೆ. 1990-91ರಲ್ಲಿ ಮನೆ ನಿರ್ಮಿಸಿದ್ದರು. ಆದರೆ, ಮೊದಲು ರಸ್ತೆ ಮನೆಯಿಂದ ಕೆಳಭಾಗದಲ್ಲಿತ್ತು. ಹೀಗಾಗಿ ಯಾವುದೇ ಸಮಸ್ಯೆ ಇರಲಿಲ್ಲ. ಆದರೆ ರಸ್ತೆ ಕಾಮಗಾರಿ ನಡೆದ ಬಳಿಕ ಮಳೆ ಬಂದಾಗ ಮಳೆ ನೀರು ಚರಂಡಿ ನೀರು ಮನೆಯೊಳಗೆ ಬರಲು ಆರಂಭಿಸಿದೆ.