ರಾಯಚೂರು: ನಿನ್ನೆ ರಾತ್ರಿಯಿಂದ ಸುರಿದ ಭಾರಿ ಮಳೆಗೆ ಅಕ್ಷರಶಃ ರಾಯಚೂರು ನಗರ ತತ್ತರಿಸಿದೆ. ಹಲವು ಬಡಾವಣೆಗಳಿಗೆ ನೀರು ನುಗ್ಗಿ ಸಂಪೂರ್ಣ ಜನ - ಜೀವನ ಅಸ್ತವ್ಯಸ್ತಗೊಳಿಸಿ, ವಾಸಿಸಲು ನೆಲೆ ಇಲ್ಲದಂತೆ ಮಾಡಿದೆ.
ನಗರದ ಸಿಯಾತಲಾಬ್, ಜಲಾಲನಗರ, ಜಹಿರಬಾದ್, ದೇವಿನಗರ, ಬಸವನಭಾವಿ ಚೌಕ್, ಮ್ಯಾದರ್ ಓಣಿ, ಜವಾಹರನಗರ ಸೇರಿದಂತೆ ನಾನಾ ಕಡೆ ಬಡಾವಣೆಗಳೇ ಜಲಾವೃತವಾಗಿವೆ. ಸಿಯಾತಲಾಬ್ ಬಡಾವಣೆಯ ಬಹುತೇಕ ಮನೆಗಳಿಗೆ ನೀರು ನುಗ್ಗಿ, ಮನೆಯಲ್ಲಿನ ದವಸ - ಧಾನ್ಯಗಳು, ಗೃಹೋಪಯೋಗಿ ಸಾಮಗ್ರಿಗಳು, ಪಿಠೋಪಕರಣಗಳು ನೀರು ಪಾಲಾಗಿ ನೆಲಸಲು ನೆಲವಿಲ್ಲದೇ ನೀರಿಲ್ಲನಲ್ಲೇ ಕಾಲ ಕಳೆಯುವಂತೆ ಮಾಡಿದೆ. ಮನೆಯಿಂದ ನೀರು ಹೊರಹಾಕುವುದರಲ್ಲೇ ಜನ ರಾತ್ರಿ ಕಳೆದಿದ್ದಾರೆ.
ಧಾರಾಕಾರ ಮಳೆಯಿಂದಾಗಿ ನಿನ್ನೆ ರಾತ್ರಿಯಿಂದ ವಿದ್ಯುತ್ ಸ್ಥಗಿತಗೊಳಿಸಲಾಗಿದ್ದು, ನಾನಾ ಕಡೆಗಳಲ್ಲಿ ವಿದ್ಯುತ್ ಕಂಬಗಳು, ಮನೆಗಳು ಕುಸಿದು ಬಿದ್ದಿವೆ. ಈ ಹಿಂದೆಯೇ ಸುರಿದ ಭಾರಿ ಮಳೆಯಿಂದ ಅನೇಕ ಕಡೆ ಮಳೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿತ್ತು. ಆಗ ನಗರಸಭೆ, ಜಿಲ್ಲಾಡಳಿತ ನೀರು ಹರಿದು ಹೋಗುವಂತೆ ವ್ಯವಸ್ಥೆ ಕೈಗೊಳ್ಳಬೇಕಾಗಿತ್ತು. ಆದ್ರೆ ಈ ಬಗ್ಗೆ ನಿರ್ಲಕ್ಷ್ಯ ವಹಿಸಿರುವುದೇ ಪುನಃ ರಾಯಚೂರು ನಗರದ ಅನೇಕ ಬಡಾವಣೆಗಳು ನೀರಿನಲ್ಲಿ ಮುಳುಗುವಂತೆ ಮಾಡಿದೆ.