ರಾಯಚೂರು: ಜಿಲ್ಲೆಯ ಹಲವೆಡೆ ಸುರಿದ ಧಾರಾಕಾರ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ.
ಭಾರೀ ಮಳೆಯಿಂದ ಮಿಡಗಲದಿನ್ನಿ ಕೆರೆ ಭರ್ತಿಯಾಗಿದೆ. ವಿವಿಧೆಡೆ ಜಮೀನುಗಳಿಗೆ ನೀರು ನುಗ್ಗಿ ಬೆಳೆ ಹಾನಿಯಾಗಿದೆ. ಅಲ್ಲದೆ ಗ್ರಾಮದೊಳಗೆ ನೀರು ನುಗ್ಗಿ ಗ್ರಾಮಸ್ಥರು ಪರದಾಡುತ್ತಿದ್ದಾರೆ. ವಿದ್ಯುತ್ ಪೂರೈಕೆಯಲ್ಲೂ ವ್ಯತ್ಯಯ ಉಂಟಾಗಿದೆ. ಯರಗೇರಾ, ಗುಂಜುಳ್ಳಿ, ಇಡಪನೂರು ಗ್ರಾಮಗಳಲ್ಲಿ ಭಾರಿ ಮಳೆ ಸುರಿದಿದೆ.
ಹಲವು ಮನೆಗಳಿಗೆ ನೀರು ನುಗ್ಗಿದ ಪರಿಣಾಮ ರಾತ್ರಿಯಿಡೀ ನಿದ್ದೆಯಿಲ್ಲದೆ ಸಮಸ್ಯೆ ಎದುರಿಸಿದ್ದಾರೆ. ಜೊತೆಗೆ ಆಹಾರ ಪದಾರ್ಥಗಳು, ಗೃಹ ಬಳಕೆ ಸಾಮಾನುಗಳು ನೀರುಪಾಲಾಗಿದ್ದು, ರಸ್ತೆಗಳು ಸಹ ಹಾಳಾಗಿವೆ. ಗಧಾರ ಗ್ರಾಮದ ಮಾರ್ಗದಲ್ಲಿ ಬರುವ ಹಳ್ಳದಲ್ಲಿ ನೀರು ಅಪಾರ ಪ್ರಮಾಣದಲ್ಲಿ ಹರಿಯುತ್ತಿರುವುದರಿಂದ ಗಧಾರ ಗ್ರಾಮಕ್ಕೆ ಸಂಪರ್ಕ ಕಡಿತಗೊಂಡಿದೆ.
ಮಿಡಗಲದಿನ್ನಿ ಗ್ರಾಮದ ಕೆರೆ ನೀರು, ಮಳೆ ನೀರು ಸೇರಿದ ಪರಿಣಾಮ ತಲಮಾರಿ ಗ್ರಾಮ ಜಲಾವೃತಗೊಂಡಿದೆ. ಇನ್ನೂ ತಲಮಾರಿ ಗ್ರಾಮವಷ್ಟೆ ಅಲ್ಲದೆ ಜಂಬಲದಿನ್ನಿ, ಬೂರ್ದಿಪಾಡ, ಇಡಪನೂರು ಗ್ರಾಮಗಳು ಸಹ ಜಲಾವೃತಗೊಂಡು ಗ್ರಾಮಸ್ಥರು ಪರದಾಡುವ ಸನ್ನಿವೇಶ ಎದುರಾಗಿದೆ.