ರಾಯಚೂರು: ಜಿಲ್ಲೆಯಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಇದರಿಂದಾಗಿ ದೈನಂದಿನ ವ್ಯಾಪಾರಕ್ಕೆ ತೊಂದರೆ ಉಂಟಾಗಿದೆ. ಜೊತೆಗೆ ಕೆಲವೆಡೆ ಜನಜೀವನ ಅಸ್ತವ್ಯಸ್ತಗೊಂಡಿದೆ.
ನಗರದ ಸಿಯಾತಲಾಬ್, ನೀರಭಾವಿಕುಂಟಾ, ಜಲಾಲನಗರ, ಜವಾಹರನಗರ, ಜಹಿರಬಾದ್ ಬಡಾವಣೆಗಳಿಗೆ ನೀರು ನುಗ್ಗಿದೆ. ಬಸವನಭಾವಿ ಚೌಕ್, ಚಂದ್ರಮೌಳೇಶ್ವರ ಚೌಕ್‌ನಿಂದ ಗಂಜೆ ಸರ್ಕಲ್ ರಸ್ತೆ ಸಂಪೂರ್ಣವಾಗಿ ಜಲಾವೃತಗೊಂಡಿದೆ.
ರಾಯಚೂರು ಜಿಲ್ಲೆಯಲ್ಲಿ ಭಾರೀ ಮಳೆ ರಾಯಚೂರು ತಾಲೂಕಿನ ಜೆಗರಕಲ್, ಕುಕನೂರು, ಗುರ್ಜಾಪುರ ಸಂಪರ್ಕ ಕಡಿತಗೊಂಡಿದೆ. ಈಗಾಗಲೇ ಮಳೆಯಿಂದ ಹಲವು ಮನೆಗಳು ಕುಸಿದು ಹಾನಿ ಸಂಭವಿಸಿವೆ. ಹೊಲಗಳಲ್ಲಿ ಬೆಳೆದು ನಿಂತಿರುವ ಹತ್ತಿ, ತೊಗರಿ, ಈರುಳ್ಳಿ ಬೆಳೆ ಮಳೆಗೆ ಸಿಲುಕಿ ಕೊಳೆಯುವ ಪರಿಸ್ಥಿತಿ ಎದುರಾಗಿದ್ದು, ರೈತರು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ.
ಕೆಲ ದಿನಗಳ ಹಿಂದೆಯಷ್ಟೇ ಸುರಿದ ಮಳೆಯಿಂದ ನಗರದ ಸಿಯಾತಲಾಬ್, ನೀರುಭಾವಿಕುಂಟಾ, ಜಲಾಲನಗರ ಬಡಾವಣೆಗಳು ಸಂಪೂರ್ಣವಾಗಿ ಜಲಾವೃತಗೊಂಡಿದ್ದವು. ಇದರಿಂದಾಗಿ ಆಹಾರ ಧಾನ್ಯಗಳು, ಪದಾರ್ಥಗಳು, ಗೃಹೋಪಯೋಗಿ ಸಾಮಾನುಗಳು, ಪೀಠೋಪಕರಣಗಳು ನೀರುಪಾಲಾಗಿ ತೊಂದರೆ ಅನುಭವಿಸುತ್ತಿರುವ ಮಧ್ಯೆಯೇ ಇದೀಗ ಮತ್ತೆ ಮಳೆ ಸುರಿಯುತ್ತಿರುವುದು ಜನರಲ್ಲಿ ಆತಂಕ ಮೂಡಿಸಿದೆ.