ರಾಯಚೂರು:ಆರೋಗ್ಯ ಕ್ಷೇತ್ರದಲ್ಲಿ ಕಾರ್ಯನಿವಹಿಸುತ್ತಿರುವ ವೈದ್ಯಕೀಯ ಶಿಕ್ಷಣ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ವಿವಿಧ ಬೇಡಿಕೆ ಈಡೇರಿಕೆಗೆ ಹಲವಾರು ವರ್ಷಗಳಿಂದ ಹೋರಾಟ ನಡೆಸುತ್ತಿದ್ದರೂ, ಇಲ್ಲಿಯವರೆಗೂ ಸ್ಪಂದಿಸದ ಹಿನ್ನೆಲೆ ಕಳೆದ ಐದು ದಿನಗಳಿಂದ ಅನಿರ್ಧಿಷ್ಟಾವದಿ ಹೋರಾಟ ನಡೆಸಲಾಗುತ್ತಿದೆ. ಕೂಡಲೇ ಗುತ್ತಿಗೆ ನೌಕರರ ಬೇಡಿಕೆ ಈಡೇರಿಸಬೇಕು ಎಂದು ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಸಂಘದ ಜಿಲ್ಲಾಧ್ಯಕ್ಷ ನಾಗರಾಜ ವರ್ಮ ಒತ್ತಾಯಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವೈದ್ಯಕೀಯ ಶಿಕ್ಷಣ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ವಿವಿಧ ಬೇಡಿಕೆ ಈಡೇರಿಕೆಗೆ ಹಂತ ಹಂತವಾಗಿ ಹೋರಾಟ ನಡೆಸಿದರು ಸರ್ಕಾರ ಇಲ್ಲಿಯವರೆಗೂ ಸ್ಪಂದಿಸಿಲ್ಲ ಎಂದು ಹೇಳಿದರು.
ಕೋವಿಡ್ ಸಂದರ್ಭದಲ್ಲಿ ಪ್ರಾಣ ಪಣಕ್ಕಿಟ್ಟು ಕೆಲಸ ಮಾಡುತ್ತಿರುವ ಆರೋಗ್ಯ ಇಲಾಖೆ, ವೈದ್ಯಕೀಯ ಶಿಕ್ಷಣ ಇಲಾಖೆ ಮತ್ತು ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಹೊರ ಗುತ್ತಿಗೆ ನೌಕರರಾಗಿ ರಾಜ್ಯದಲ್ಲಿ 1,500ಕ್ಕೂ ಅಧಿಕ ನೌಕರರ ಬೇಡಿಕೆ ಈಡೇರಿಕೆಗೆ ಸೆ.24 ರಿಂದ ಕೆಲಸ ಬಹಿಷ್ಕರಿಸಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿದ್ದೇವೆ. ಆದರೆ, ಅಧಿಕಾರಿಗಳು ಕೆಲ ನೌಕರರನ್ನು ಗುರಿಯಾಸಿ ಶಿಸ್ತು ಕ್ರಮ ಕೈಗೊಳ್ಳಲು ಮುಂದಾಗಿರುವುದು ಖಂಡನೀಯ ಎಂದರು.
ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರಿಗೆ ಸೇವಾ ಭದ್ರತೆ ನೀಡಬೇಕು, ಎಲ್ಲ ಹುದ್ದೆಗಳಿಗೆ ವೇತನ ಭತ್ಯ ಮತ್ತು ವೇತನ ಶ್ರೇಣಿ ನೀಡಿ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು. ಹೊರಗುತ್ತಿಗೆಯಲ್ಲಿರುವ ಎಲ್ಲ ನೌಕರರಿಗೂ ಗುತ್ತಿಗೆದಾರಿಗೆ ಮಧ್ಯವರ್ತಿಗಳಿಲ್ಲದೇ ನೇರ ಇಲಾಖೆಯಿಂದ ವೇತನ ಪಾವತಿ ಮಾಡಬೇಕು. ಪರಸ್ಪರರ ವರ್ಗಾವಣೆ ಹಾಗೂ ಖಾಲಿ ಇರುವ ಜಾಗದಲ್ಲಿ ಸಾಮಾನ್ಯ ವರ್ಗಾವಣೆಗೆ ಅವಕಾಶ ನೀಡುವುದು, ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರಿಗೆ ಖಾಯಂ ನೌಕರಿ ನೀಡಬೇಕು ಸೇರಿದಂತೆ ಇತರ ಪ್ರಮುಖ ಬೇಡಿಕೆ ಈಡೇರಿಕೆಗೆ ಆಗ್ರಹಿಸಿದರು.