ರಾಯಚೂರು: ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಪತ್ನಿ ಅನಿತಾ ಕುಮಾರಸ್ವಾಮಿ ಮಂತ್ರಾಲಯಕ್ಕೆ ಭೇೆಟಿ ನೀಡಿ ರಾಘವೇಂದ್ರ ಸ್ವಾಮಿಯ ದರ್ಶನ ಪಡೆದರು. ಇದಕ್ಕೂ ಮುನ್ನ ಮಂಚಾಲಮ್ಮ ದೇವಿಗೆ ವಿಶೇಷ ಪೂಜೆ ನೆರವೇರಿಸಿದರು. ಬಳಿಕ ಮಂತ್ರಾಲಯದಲ್ಲಿ ರಾಘವೇಂದ್ರ ಸ್ವಾಮಿಯ ಮೂಲಸ್ಥಳ ಬೃಂದಾವನದಲ್ಲಿ ಪೂಜೆ ಸಲ್ಲಿಸಿದರು.
6ನೇ ದಿನದ ಪಂಚರತ್ನ ಯಾತ್ರೆ:ರಾಯಚೂರು ಜಿಲ್ಲೆಯಲ್ಲಿ ನಡೆಯುತ್ತಿರುವ ಪಂಚರತ್ನ ಯಾತ್ರೆ ಇಂದು 6ನೇ ದಿನಕ್ಕೆ ಕಾಲಿಟ್ಟಿದೆ. ಇಂದು ಹೆಚ್‌ಡಿಕೆ ದಂಪತಿ ಮಠದ ಪೀಠಾಧಿಪತಿ ಶ್ರೀಸುಬುಧೇಂದ್ರ ತೀರ್ಥರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ಬಳಿಕ ಶ್ರೀಗಳು ಮಠದ ವತಿಯಿಂದ ದಂಪತಿಯನ್ನು ಸನ್ಮಾನಿಸಿದರು. ಮಾಜಿ ಸಿಎಂ ಬರುತ್ತಿರುವ ಹಿನ್ನೆಲೆಯಲ್ಲಿ ಮಠದ ಅಧಿಕಾರಿಗಳು ಸಂಪ್ರದಾಯದಂತೆ ಬರಮಾಡಿಕೊಂಡರು. ದರ್ಶನಕ್ಕೆ ವಿಶೇಷ ಅವಕಾಶ ಕಲ್ಪಿಸಿಕೊಟ್ಟರು. ಜೆಡಿಎಸ್ ಮುಖಂಡರು ಕುಮಾರಸ್ವಾಮಿ ಜತೆಗಿದ್ದರು.
"ಹಲವು ವರ್ಷಗಳಾದರೂ ಮಂತ್ರಾಲಯಕ್ಕೆ ಆಗಮಿಸಲು ಸಾಧ್ಯವಾಗಿರಲಿಲ್ಲ. ಕೋವಿಡ್, ಮಳೆಯ ಅನಾಹುತಗಳಿಂದ ಈ ಭಾಗದಲ್ಲಿ ಪ್ರವಾಸ ಮಾಡಲು ಸಾಧ್ಯವಾಗಿರಲ್ಲ. ಕಳೆದ ಐದು ದಿನಗಳಿಂದ ರಾಯಚೂರು ಜಿಲ್ಲೆಯಲ್ಲಿ ಪಂಚರತ್ನ ಯಾತ್ರೆ ನಡೆಯುತ್ತಿದೆ. ಈ ಯಾತ್ರೆ ಆಗಮಿಸಿದಾಗ ಆಶೀರ್ವಾದ ಮಾಡಲು ಗುರುರಾಘವೇಂದ್ರ ಸ್ವಾಮಿಗಳು ಪ್ರೇರಿಪಿಸಿಕೊಂಡು ಕರೆಸಿಕೊಂಡಿದ್ದಾರೆ" ಎಂದು ಹೆಚ್‌ಡಿಕೆ ಹೇಳಿದರು.
"ನಾಡಿನ ಜನತೆಯ ಕಷ್ಟಗಳನ್ನು ಬಗೆಹರಿಸಿ, ಪ್ರತಿ ಕುಟುಂಬಗಳ ನೆಮ್ಮದಿಯ ಬದುಕು ಕಾಣಬೇಕು ಎನ್ನುವುದು ಅಭಿಲಾಶೆ ಇಟ್ಟುಕೊಂಡು ಹೊರಟಿದ್ದೇವೆ. ಆ ಗುರಿಯನ್ನು ಇರಿಸಿಕೊಂಡು ಹೋಗುತ್ತಿರುವುದಕ್ಕೆ ಅನುಗ್ರಹ ನೀಡಬೇಕೆಂದು ದಂಪತಿ ಸಮೇತ ರಾಯರನ್ನು ಬೇಡಿಕೆಕೊಂಡಿದ್ದೇವೆ" ಎಂದು ಅವರು ತಿಳಿಸಿದರು.