ರಾಯಚೂರು: ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಯ ಗುರು ವೈಭವ ಉತ್ಸವ ಇಂದಿನಿಂದ ಒಂದು ವಾರಗಳ ಕಾಲ ನಡೆಯಲಿದ್ದು, ಇದಕ್ಕಾಗಿ ಶ್ರೀ ಮಠದಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಪೀಠಾಧಿಪತಿ ಶ್ರೀ ಸುಬುದೇಂಧ್ರ ತೀರ್ಥರ ನೇತೃತ್ವದಲ್ಲಿ ಕಾರ್ಯಕ್ರಮಗಳು ನಡೆಯಲಿವೆ. ಇಂದು ಶ್ರೀ ಅಭಯ ಆಂಜನೇಯ ಸ್ವಾಮಿ ವಿಗ್ರಹದ ಬಳಿ ಕಟ್ಟಡ ಉದ್ಘಾಟನೆ ನೆರವೇರಲಿದೆ. ನಾಳೆ ಶ್ರೀ ರಾಘವೇಂದ್ರ ಸ್ವಾಮೀಜಿಗಳ 400ನೇ ಪಟ್ಟಾಭಿಷೇಕ ನಡೆಯಲಿದ್ದು, ಮಾ. 20ರಂದು ರಾಯರ 426ನೇ ವರ್ಧಂತಿ ಮಹೋತ್ಸವ ನಡೆಯಲಿದೆ.
ಶ್ರೀ ರಾಘವೇಂದ್ರ ಸ್ವಾಮಿಯ ಗುರು ವೈಭವ ಉತ್ಸವ
ಇಂದು ಬೆಳಗ್ಗೆಯಿಂದ ಶ್ರೀ ಮಠದಲ್ಲಿ ಸುಪ್ರಭಾತ, ನಿರ್ಮಲ ವಿಸರ್ಜನೆ, ಮೂಲ ರಾಮದೇವರ ಪೂಜೆ ನೇರವೇರಿಸಲಾಯಿತು. ಜತೆಗೆ ಅಲಂಕಾರ ಸೇವೆ, ಉತ್ಸವ ಮೂರ್ತಿ ಶ್ರೀ ಪ್ರಹ್ಲಾದರಾಜರ ಮೆರವಣಿಗೆ, ಮಹಾ ಪಂಚಾಮೃತ ಅಭಿಷೇಕ, ಸಿಂಹವಾಹನೋತ್ಸವ, ಬಂಗಾರ ರಥೋತ್ಸವ ಸೇರಿದಂತೆ ಶ್ರೀ ಮಠದಲ್ಲಿ 7 ದಿನಗಳ ಕಾಲ ನಾನಾ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ. ಈ 7 ದಿನಗಳ ಕಾಲವೂ ಬೆಳಗ್ಗೆ 10 ಗಂಟೆಗೆ ವಿದ್ವಾಂಸರಿಂದ ಜ್ಞಾನ ಯಜ್ಞಗಳು ನಡೆದರೆ ಸಂಜೆ ವೇಳೆ ಅಭಿವಂದನಾ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.
ಈ ಸುದ್ದಿಯನ್ನೂ ಓದಿ:ಅದ್ಧೂರಿಯಾಗಿ ನಡೆದ ಬೀರಲಿಂಗೇಶ್ವರ ಜಾತ್ರಾ ಮಹೋತ್ಸವ
ಏಳು ದಿನಗಳ ಕಾಲ ನಡೆಯುವ ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳು ಹಾಗೂ ದಾನಿಗಳು ಭಾಗವಹಿಸಲಿದ್ದು, ಅವರಿಗೆ ಶ್ರೀಮಠದಿಂದ ಸನ್ಮಾನಿಸಲಾಗುವುದು. ಸಂಗೀತಗಾರರಿಂದ ಸಂಗೀತ ಸುಧೆ, ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳು, ಪೌರಾಣಿಕ ನಾಟಕ ಹಾಗೂ ಭರತನಾಟ್ಯ ಪ್ರದರ್ಶನವಾಗಲಿದೆ. ಇನ್ನೂ ರಾಯರ ಗುರು ವೈಭವ ಉತ್ಸವ ಕಣ್ತುಂಬಿಕೊಳ್ಳಲು ದೇಶದ ನಾನಾ ಮೂಲೆಗಳಿಂದ ಶ್ರೀಮಠಕ್ಕೆ ಭಕ್ತರು ಆಗಮಿಸುತ್ತಿದ್ದಾರೆ.