ರಾಯಚೂರು: ಕೊರೊನಾ ಹಾಗೂ ಲಾಕ್ಡೌನ್ ಎಫೆಕ್ಟ್ನಿಂದಾಗಿ ಶುಭ ಸಮಾರಂಭಗಳಿಗೆ ಅಡ್ಡಿಯಾಗಿತ್ತು. ಲಾಕ್ಡೌನ್ ನಿಯಾಮವಳಿಯಂತೆ ಕೆಲವೇ ಮಂದಿಗಷ್ಟೇ ವಿವಾಹ ಸಮಾರಂಭಗಳಲ್ಲಿ ಭಾಗಿಯಾಗಲು ಅವಕಾಶ ನೀಡಲಾಗಿತ್ತು. ಈ ಎಲ್ಲ ಕಾರಣದಿಂದಾಗಿ ಮನೆ ಮಂದಿ ಸರಳ ವಿವಾಹದ ಮೊರೆ ಹೋಗಿದ್ದರು.
ಇಷ್ಟಾದರೂ ರಾಯಚೂರು ಜಿಲ್ಲೆಯಲ್ಲಿ ಲಾಕ್ಡೌನ್ ವೇಳೆ ಸಾವಿರಾರು ವಿವಾಹಗಳು ಜರುಗಿರುವುದು ಕಂಡು ಬಂದಿದೆ. ಜಿಲ್ಲೆಯಲ್ಲಿ ಕಲ್ಯಾಣ ಮಹೋತ್ಸವಕ್ಕೆ ಅನುಮತಿ ನೀಡುವಂತೆ ಒಟ್ಟು 1,804 ಅರ್ಜಿ ಸಲ್ಲಿಸಿದ್ದಾರೆ. ಜಿಲ್ಲೆಯ ಒಟ್ಟು 7 ತಾಲೂಕುಗಳ ಪೈಕಿ ರಾಯಚೂರು ನಗರ ಹಾಗೂ ತಾಲೂಕಿನಲ್ಲಿ 878 ವಿವಾಹಗಳು ನಡೆದಿವೆ.
ಇನ್ನು ದೇವದುರ್ಗ ತಾಲೂಕಿನಲ್ಲಿ 213, ಸಿಂಧನೂರು-411, ಮಸ್ಕಿ-98, ಮಾನವಿ-163, ಸಿರವಾರ-41 ವಿವಾಹ ನಡೆಸುವುದಕ್ಕೆ ಆಯಾ ತಾಲೂಕು ಆಡಳಿತ ಅನುಮತಿ ನೀಡಿದೆ. ಇನ್ನೂ ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಪ್ರಮಾಣ ಹೆಚ್ಚಳವಾದ ಹಿನ್ನೆಲೆ ಶುಭ ಸಮಾರಂಭ ನಡೆಸದಂತೆ ಮೇ.23ರಿಂದ ನಿಷೇಧ ಹೇರಿ ಆದೇಶ ಮಾಡಿತ್ತು.
ಆದರೆ ಈ ನಿಷೇಧದ ನಡುವೆಯೂ ಕೆಲವು ಕಡೆ ಸರಳ ವಿವಾಹ ಸಮಾರಂಭ ನಡೆದಿದೆ ಎನ್ನಲಾಗಿದೆ. ಇದೇ ವೇಳೆ ಲಿಂಗಸೂಗೂರು ತಾಲೂಕಿನ ಹೊನ್ನಾಳಿ ಗ್ರಾಮದಲ್ಲಿ ವಿವಾಹ ಸಮಾರಂಭ ನಡೆಸಿದ್ದ ಕಾರಣ ಕುಟುಂಬಸ್ಥರ ವಿರುದ್ಧ ಪ್ರಕರಣ ಸಹ ದಾಖಲಾಗಿತ್ತು.
ಓದಿ:ಬೆಂಗಳೂರು ಸೋಂಕಿತರ ಸಂಖ್ಯೆ ಗಣನೀಯ ಇಳಿಕೆ - ಚೇತರಿಕೆ ಪ್ರಮಾಣ ಹೆಚ್ಚಳ