ರಾಯಚೂರು:ಕೃಷ್ಣ ನದಿ ಪ್ರವಾಹ ಪೀಡಿತರಿಗೆ ಆದಷ್ಟು ಬೇಗನೆ ಪರಿಹಾರ ವಿತರಿಸಿ ಅವರು ಪ್ರವಾಹದಿಂದ ಎಲ್ಲವನ್ನೂ ಕಳೆದುಕೊಂಡಿದ್ದಾರೆ, ನೇರವಾಗಿ ಅವರ ಖಾತೆಗೆ ಹಣವನ್ನು ಹಾಕಿ ಎಂದು ಕರ್ನಾಟಕ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಜಾವೇದ ಅಕ್ತರ್ ಹೇಳಿದರು.
ರಾಯಚೂರು ಜಿಲ್ಲೆಯ ಪ್ರವಾಹ ಪರಿಸ್ಥಿತಿ ಕುರಿತು ಕರೆದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 200 ಜನರಿರುವ ಕಡೆ 24 ಗಂಟೆಗಳ ಕಾಲ ಆರೋಗ್ಯ ಸೇವೆ ನೀಡಬೇಕು. ಶುದ್ಧ ಕುಡಿಯುವ ನೀರು ಒದಗಿಸಬೇಕು. ಸೊಳ್ಳೆಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು ಮತ್ತು ಆಗಾಗ ಜನರ ಆರೋಗ್ಯ ಪರೀಕ್ಷೆ ಮಾಡುತ್ತಿರಬೇಕು ಎಂದು ಹೇಳಿದರು.
ಜಿಲ್ಲಾಧಿಕಾರಿ ಶರತ್.ಬಿ ಮಾತನಾಡಿ, ಪ್ರವಾಹದ ವೇಳೆ ರಕ್ಷಣಾ ಕಾರ್ಯದಲ್ಲಿ ಭಾರತೀಯ ಸೇನೆಯ 102 ಜನ, ಎನ್ಡಿಆರ್ಎಫ್ನ 45 ಸಿಬ್ಬಂದಿ ಹಾಗೂ ಒಂದು ಸೇನಾ ಹೆಲಿಕಾಪ್ಟರ್ ಮತ್ತು ಜಿಲ್ಲೆಯ ವಿವಿಧ ಇಲಾಖೆಯ ಅಧಿಕಾರಿಗಳು ನಿರ್ವಹಿಸಿದ ಕಾರ್ಯಗಳನ್ನು ವಿವರಿಸಿದರು ಹಾಗೂ ಜಿಲ್ಲೆಯಲ್ಲಿ ಹೆಚ್ಚು ಹಾನಿ ದೇವದುರ್ಗ ತಾಲೂಕಿನಲ್ಲಿ ಆಗಿರುವ ಕುರಿತು ಕಾರ್ಯದರ್ಶಿಗಳ ಗಮನಕ್ಕೆ ತಂದರು.
ಕೃಷಿ ಇಲಾಖೆ, ಆರೋಗ್ಯ ಇಲಾಖೆ ಹಾಗೂ ಇತರೆ ಇಲಾಖೆಯ ಅಧಿಕಾರಿಗಳು ಪ್ರವಾಹ ಸಂದರ್ಭದಲ್ಲಿ ತೆಗೆದುಕೊಂಡ ಕ್ರಮಗಳ ಕುರಿತು ವಿವರವಾದ ಮಾಹಿತಿಯನ್ನು ಅಪರ ಮುಖ್ಯ ಕಾರ್ಯದರ್ಶಿಗಳು ಪಡೆದುಕೊಂಡರು.
ಈ ಸಭೆಯಲ್ಲಿ ಜಿಲ್ಲಾಧಿಕಾರಿ ಶರತ್. ಬಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮೀಕಾಂತ ರೆಡ್ಡಿ, ಅಪರ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಹಾಗೂ ಇತರೆ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.