ರಾಯಚೂರು:ನಗರದಲ್ಲಿ ಗಾಂಜಾ ಲೇಪಿತ ಚಾಕೊಲೇಟ್ ಮಾರಾಟ ಮಾಡುತ್ತಿದ್ದ ಮನೆಯೊಂದರ ಮೇಲೆ ದಾಳಿ ನಡೆಸಿದ ಅಬಕಾರಿ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ರಾಚಯ್ಯ ಸ್ವಾಮಿ ಹಾಗೂ ಅಂಬರಯ್ಯ ಬಂಧಿತರು. ನಗರದ ಎಲ್.ಬಿ.ಎಸ್ ನಗರ ಮತ್ತು ಇಂಡಸ್ಟ್ರೀಯಲ್ ಏರಿಯಾ ಸೇರಿದಂತೆ ನಗರದ ನಾನಾ ಕಡೆಗಳಲ್ಲಿ ಗಾಂಜಾ ಲೇಪಿತ ಚಾಕೊಲೇಟ್ ಮಾರಾಟ ಮಾಡಲಾಗುತ್ತಿತ್ತು. ಇದರ ಖಚಿತ ಮಾಹಿತಿ ಮೇರೆೆಗೆ ಅಬಕಾರಿ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ ಮಾಲು ಜಪ್ತಿ ಮಾಡಿದ್ದಾರೆ. 6 ಗ್ರಾಂ ತೂಕದ ಗಾಂಜಾ ಲೇಪಿತ ಚಾಕೊಲೇಟ್‌ಗಳನ್ನು 30, 50, 100 ರೂಪಾಯಿಗೆ ಅಂಗಡಿಗಳಲ್ಲಿ ಮಾರಾಟ ಮಾಡಲಾಗುತ್ತಿತ್ತು.
ಉತ್ತರ ಪ್ರದೇಶದಲ್ಲಿ ತಯಾರಿಸಿದ ಈ ಗಾಂಜಾ ಲೇಪಿತ ಚಾಕೊಲೇಟ್‌ಗಳನ್ನು ರಾಯಚೂರಿಗೆ ತಂದು ಎಲ್.ಬಿ.ಎಸ್ ನಗರ ಮತ್ತು ಇಂಡಸ್ಟ್ರಿಯಲ್ ಏರಿಯಾದಲ್ಲಿ ಆರೋಪಿಗಳು ಮಾರಾಟ ಮಾಡುತ್ತಿದ್ದರು. ಕಳೆದ ಹಲವು ದಿನಗಳಿಂದ ರಾಜಾರೋಷವಾಗಿ ಈ ದಂಧೆ ನಡೆಯುತ್ತಿತ್ತು ಎನ್ನಲಾಗಿದೆ. ಖಚಿತ ಮಾಹಿತಿ ಮೇರೆಗೆ ಅಬಕಾರಿ ಪೊಲೀಸರು ದಾಳಿ ನಡೆಸಿ, ಶ್ರೀಪಾನಾ ಮುನಾಕಾ ಹಾಗೂ ಶ್ರೀ ಆನಂದ ಮುನಾಕಾ ಎನ್ನುವ ಹೆಸರಿನಲ್ಲಿದ್ದ 482 ಗಾಂಜಾ ಲೇಪಿತ ಚಾಕೊಲೇಟ್‌ಗಳನ್ನು ಜಪ್ತಿ ಮಾಡಿದ್ದಾರೆ.
'ಬಂಧಿತ ಆರೋಪಿಗಳ ವಿಚಾರಣೆ ನಡೆಸಿ, ಇದರ ಕಿಂಗ್ ಪಿನ್ ಬಗ್ಗೆ ಮಾಹಿತಿ ಕಲೆಹಾಕಲಾಗುವುದು. ಈ ಬಗ್ಗೆ ಅಬಕಾರಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ' ಎಂದು ಅಬಕಾರಿ ನಿರೀಕ್ಷಕ ಹನುಮಂತ ಗುತ್ತೆದಾರ ಮಾಹಿತಿ ನೀಡಿದ್ದಾರೆ.