ರಾಯಚೂರು: ಮಸ್ಕಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ರಂಗೇರುತ್ತಿದೆ. ಕಾಂಗ್ರೆಸ್, ಬಿಜೆಪಿ ಅಭ್ಯರ್ಥಿಗಳಿಬ್ಬರು ಇಂದು ನಾಮಪತ್ರ ಸಲ್ಲಿಸಿದ್ದಾರೆ. ಗೆಲುವಿಗಾಗಿ ಎರಡು ಪಕ್ಷಗಳು ಚುನಾವಣೆ ರಣತಂತ್ರ ರೂಪಿಸುತ್ತಿದ್ದು, ಇಬ್ಬರು ಅಭ್ಯರ್ಥಿಗಳು ಭರ್ಜರಿ ಪ್ರಚಾರಕ್ಕೆ ಧುಮುಕಿದ್ದಾರೆ.
ಮಸ್ಕಿ ಪಟ್ಟಣದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳು ಸಾಂಕೇತಿಕವಾಗಿ ತಮ್ಮ ಉಮೇದುವಾರಿಕೆ ಸಲ್ಲಿಸಿದ್ರು. ಬಳಿಕ ಗೆಲುವು ನಮ್ಮದೇ ಎಂದು ಇಬ್ಬರೂ ಅಭ್ಯರ್ಥಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಕ್ಷೇತ್ರದಲ್ಲಿ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಆರ್.ಬಸವನಗೌಡ ತುರುವಿಹಾಳ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಿಗೆ ಪ್ರಚಾರಕ್ಕೆ ತೆರಳುತ್ತಿದ್ದು, ಗ್ರಾಮದಲ್ಲಿ ಜನರು ಚುನಾವಣೆ ವೆಚ್ಚಕ್ಕಾಗಿ ಹಣ ಸಂಗ್ರಹಿಸಿ ದೇಣಿಗೆ ನೀಡುವ ಮೂಲಕ ಬೆಂಬಲಿಸುತ್ತಿದ್ದಾರೆ. ಗ್ರಾಮಸ್ಥರು ಸೇರಿಕೊಂಡು 50 ಸಾವಿರ, 20 ಸಾವಿರ, 10 ಸಾವಿರ ರೂ. ಹಣವನ್ನು ಬಸವನಗೌಡ ತುರುವಿಹಾಳ ಅವರಿಗೆ ದೇಣಿಗೆಯಾಗಿ ನೀಡುವ ಬೆಂಬಲಿಸುವುದಾಗಿ ಹೇಳುತ್ತಿದ್ದಾರೆ.