ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿದರು. ರಾಯಚೂರು:''ಮಿಷನ್ ಇಂದ್ರಧನುಷ್ 5.0 ಲಸಿಕೆ ಕಾರ್ಯಕ್ರಮ ಸಂಪೂರ್ಣವಾಗಿ ಅನುಷ್ಠಾನವಾಗಬೇಕು. 12 ಪ್ರಕಾರದ ಲಸಿಕೆಗಳನ್ನು ರಾಜ್ಯದಲ್ಲಿ ಮಕ್ಕಳಿಗೆ ನೀಡುತ್ತಿದ್ದೇವೆ. ಈಗಾಗಲೇ ಶೇ.97 ರಷ್ಟು ಲಸಿಕೆಗಳನ್ನು ನೀಡಿದ್ದೇವೆ'' ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ರಾಜ್ಯ ಮಟ್ಟದ ಮಿಷನ್ ಇಂದ್ರಧನುಷ್ 5.0 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಯಚೂರಿನಲ್ಲಿ ಶೇ.92 ರಷ್ಟು ಮಾತ್ರ ಲಸಿಕಾ ಕಾರ್ಯಕ್ರಮ ಪೂರ್ಣವಾಗಿದೆ. ರಾಯಚೂರು ಜಿಲ್ಲೆಯಲ್ಲಿ ಪೂರ್ಣ ಪ್ರಮಾಣದ ಲಸಿಕೆ ಕಾರ್ಯ ಆಗಿಲ್ಲ. ರಾಜ್ಯದ ಕೆಲವು ಜಿಲ್ಲೆಗಳು ಲಸಿಕೆ ಹಾಕುವಲ್ಲಿ ಹಿಂದೆ ಬಿದ್ದಿವೆ. ರಾಜ್ಯದಲ್ಲಿ ಒಟ್ಟು 1 ಲಕ್ಷದ 63 ಸಾವಿರ ಮಕ್ಕಳು ಲಸಿಕೆ ಪಡೆದಿಲ್ಲ ಎಂದರು.
ಜಿಲ್ಲೆಗೆ ಲಭಿಸಿದ ಮೂರು ಸಮುದಾಯ ಆರೋಗ್ಯ ಕೇಂದ್ರಗಳು:''ಎಂಆರ್ 1, ಎಂಆರ್ 2 ಲಸಿಕೆ ಸಂಪೂರ್ಣವಾಗಿ ನೀಡುವಲ್ಲಿ ಹಿಂದೆ ಬಿದ್ದಿದ್ದೇವೆ. ಆಗಸ್ಟ್, ಸೆಪ್ಟೆಂಬರ್, ಅಕ್ಟೋಬರ್ನಲ್ಲಿ ಲಸಿಕೆಗಳನ್ನು ಮೂರು ಹಂತದಲ್ಲಿ ನೀಡುತ್ತಿದ್ದೇವೆ. ಹೀಗಾಗಿ ಅಭಿಯಾನ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಜಿಲ್ಲೆಗೆ ಈ ವರ್ಷ ಮೂರು ಸಮುದಾಯ ಆರೋಗ್ಯ ಕೇಂದ್ರ ನೀಡುತ್ತಿದ್ದೇವೆ. ವೈದ್ಯರ ಕೊರತೆ ನೀಗಿಸಲು ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲು ಸೂಚಿಸಿದ್ದೇನೆ. ವೈದ್ಯರ ಸಮಸ್ಯೆ ಶೀಘ್ರದಲ್ಲೇ ಬಗೆಹರಿಯಲಿದೆ'' ಎಂದು ತಿಳಿಸಿದರು.
ಆಶಾಕಿರಣ ಕಾರ್ಯಕ್ರಮ:''ಆಶಾಕಿರಣ ಕಾರ್ಯಕ್ರಮಕ್ಕೆ ಮುಂದಿನ ದಿನಗಳಲ್ಲಿ ನಾಲ್ಕು ಜಿಲ್ಲೆಗಳಲ್ಲಿ ಚಾಲನೆ ಸಿಗಲಿದೆ. ಉಚಿತ ಕಣ್ಣಿನ ಪರೀಕ್ಷೆ, ಚಿಕಿತ್ಸೆ ನೀಡಿ ಕನ್ನಡಕ ನೀಡುವ ಕಾರ್ಯಕ್ರಮ, ರಾಯಚೂರು ಜಿಲ್ಲೆ ಸೇರಿ ಹೆಚ್ಚುವರಿ 4 ಜಿಲ್ಲೆಗಳನ್ನು ಕಾರ್ಯಕ್ರಮಕ್ಕೆ ಸೇರಿಸುತ್ತಿದ್ದೇವೆ. ರಾಯಚೂರು ಜಿಲ್ಲಾಸ್ಪತ್ರೆ, ವೈದ್ಯಕೀಯ ಕಾಲೇಜಿನೊಂದಿಗೆ ಸೇರಿಸಲಾಗಿದೆ. ಅಲ್ಲಿನ ಸಮಸ್ಯೆಗಳನ್ನ ಬಗೆಹರಿಸಲು ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ'' ಎಂದು ಸಚಿವರು ಭರವಸೆ ನೀಡಿದರು.
ಸಚಿವ ಎನ್. ಎಸ್. ಭೋಸರಾಜು ಮಾತನಾಡಿ, ''ಅಧಿಕಾರಿಗಳು, ಶಾಸಕರು ಸೇರಿದಂತೆ ಎಲ್ಲರೂ ಕೈ ಜೊಡಿಸಿದರೆ ರಾಜ್ಯ ಮಟ್ಟದ ಪರಿಣಾಮಕಾರಿ ಮಿಷನ್ ಇಂದ್ರಧನುಷ್ 5.0 ಕಾರ್ಯಕ್ರಮ ಯಶಸ್ವಿಯಾಗುತ್ತದೆ'' ಎಂದ ಅವರು, ''ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಲವಾರು ಸಮಸ್ಯೆ ಎದುರಿಸುತ್ತಿವೆ. ಜೊತೆಗೆ ಸರ್ಕಾರಿ ವೈದ್ಯರು ರಾಜ್ಯದಲ್ಲಿ ಸಮರ್ಪಕವಾಗಿ ಕಾರ್ಯನಿರ್ವಹಿಸಬೇಕಿದೆ. ಖಾಸಗಿ ಆಸ್ಪತ್ರೆಗೆ ಹೆಚ್ಚು ಸಮಯ ಕೊಟ್ಟು ಸರ್ಕಾರಿ ಆಸ್ಪತ್ರೆಗಳನ್ನು ನಿರ್ಲಕ್ಷ್ಯ ಮಾಡಬಾರದು. ವೈದ್ಯರು ಸರಿಯಾಗಿ ಕೆಲಸ ಮಾಡಿದರೆ, ಸರ್ಕಾರದ ಯೋಜನೆಗಳು ಜನರಿಗೆ ತಲುಪುತ್ತವೆ'' ಎಂದು ಸಲಹೆ ನೀಡಿದರು.
ನಟ ವಿಜಯ ರಾಘವೇಂದ್ರ ಪತ್ನಿ ಸ್ಪಂದನಾಗೆ ಸಂತಾಪ:ನಟ ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ ಹೃದಯಘಾತದಿಂದ ನಿಧನರಾಗಿರುವ ಹಿನ್ನೆಲೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಸಂತಾಪ ಸೂಚಿಸಿದರು. ರಾಯಚೂರು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಿಕ್ಕ ವಯಸ್ಸಿನಲ್ಲಿ ಹೃದಯಾಘಾತದಿಂದ ಮೃತಪಟ್ಟಿರುವ ವಿಷಯ ತೀವ್ರ ದುಃಖಕರವಾಗಿದೆ. ಅವರು ಕುಟುಂಬಕ್ಕೆ ಈ ನೋವನ್ನು ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದರು.
ಇದನ್ನೂ ಓದಿ:ನಟ ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ ನಿಧನ: ಗಣ್ಯರಿಂದ ಸಂತಾಪ