ರಾಯಚೂರು:ದೇವದುರ್ಗ ತಾಲೂಕಿನಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ನಡೆದ ಅಕ್ರಮಕ್ಕೆ ಸಂಬಂಧಿಸಿದಂತೆ ಆರೋಪ ಎದುರಿಸುತ್ತಿರುವ ನಾಲ್ವರು ಪಿಡಿಒಗಳನ್ನು ಅಮಾನತುಗೊಳಿಸಿ ಜಿಲ್ಲಾ ಪಂಚಾಯಿತಿ ಸಿಇಒ ಆದೇಶ ಹೊರಡಿಸಿದ್ದಾರೆ. ಕ್ಯಾದಗೇರಾ ಪಿಡಿಒ ಸಿ.ಬಿ. ಪಾಟೀಲ್, ಗಾಣಧಾಳ ಪಿಡಿಒ ಮಲ್ಲಪ್ಪ, ಜಾಲಹಳ್ಳಿ ಪಿಡಿಒ ಪತ್ತೆಪ್ಪ ರಾಠೋಡ್, ಶಾವಂತಗೇರಾ ಪಿಡಿಒ ಗುರುಸ್ವಾಮಿ ಅವರನ್ನು ಅಮಾನತುಗೊಳಿಸಲಾಗಿದೆ. ಜಿಲ್ಲೆಯ ದೇವದುರ್ಗದ 33 ಗ್ರಾ.ಪಂ ಗಳಲ್ಲಿ 100 ಕೋಟಿಗೂ ಹೆಚ್ಚು ರೂ. ಅಕ್ರಮ ನಡೆದಿರುವ ಬಗ್ಗೆ ಸಾಮಾಜಿಕ ಲೆಕ್ಕಪರಿಶೋಧನಾ ಸಮಿತಿ ತನಿಖೆಯಲ್ಲಿ ಪತ್ತೆಯಾಗಿತ್ತು.
ಆದೇಶದಲ್ಲಿ ಏನಿದೆ?: ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು 1957 ರ ನಿಯಮ-10 (1) (ಡಿ) ಅಡಿ ಕ್ಯಾದಗೇರಾ ಪಿಡಿಒ ಸಿ. ಬಿ. ಪಾಟೀಲ್, ಗಾಣಧಾಳ ಪಿಡಿಒ ಮಲ್ಲಪ್ಪ, ಜಾಲಹಳ್ಳಿ ಪಿಡಿಒ ಪತ್ತೆಪ್ಪ ರಾಠೋಡ್, ಶಾವಂತಗೇರಾ ಪಿಡಿಒ ಗುರುಸ್ವಾಮಿ ಅವರುಗಳ ವಿರುದ್ಧದ ಆರೋಪಗಳ ಇಲಾಖಾ ವಿಚಾರಣೆಯನ್ನು ಕಾಯ್ದಿರಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಸೇವೆಯಿಂದ ಅಮಾನತುಗೊಳಿಸಿ ಆದೇಶಿಸಿದ್ದೇನೆ ಹಾಗೂ ಸಕ್ಷಮ ಪ್ರಾಧಿಕಾರದ ಅನುಮತಿಯಿಲ್ಲದೆ ಕೇಂದ್ರಸ್ಥಾನ ಬಿಡತಕ್ಕದ್ದಲ್ಲ ಎಂದು ರಾಯಚೂರು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಾಂಡ್ವೆ ರಾಹುಲ್ ತುಕಾರಾಮ ಆದೇಶಿಸಿದ್ದಾರೆ.