ರಾಯಚೂರು: ವಿಚ್ಛೇದನ ನೀಡದ ಹಿನ್ನೆಲೆ ಪತ್ನಿಯ ಕುಟುಂಬಕ್ಕೆ ಪೆಟ್ರೋಲ್ ಸುರಿದು ಪತಿ ಬೆಂಕಿ ಹಚ್ಚಿದ ಪರಿಣಾಮ ಇಬ್ಬರು ಮೃತಪಟ್ಟು, ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ನಿನ್ನೆ ಕೊಡೇಕಲ್ ಸಮೀಪದ ನಾರಾಯಣಪುರ ಗ್ರಾಮದ ಛಾಯಾ ಕಾಲೋನಿಯಲ್ಲಿ ನಡೆದಿತ್ತು. ಇಂದು ಗಾಯಗೊಂಡಿದ್ದ ಮತ್ತಿಬ್ಬರು ಸಹ ಚಿಕಿತ್ಸೆ ಫಲಕಾರಿಯಾದೇ ಮೃತಪಟ್ಟಿದ್ದಾರೆ.
ಸಿದ್ದಪ್ಪ ಮುರಾಳ(62), ಮುತ್ತಪ್ಪ ಮುರಾಳ(38) ಮೃತರು. ಆರೋಪಿ ಶರಣಪ್ಪನ ಪತ್ನಿ ಹುಲಿಗೆಮ್ಮ ಅವರು ಲಿಂಗಸೂಗೂರಿನ ಕೆಎಸ್‌ಆರ್‌ಟಿಸಿ ಡಿಪೋದಲ್ಲಿ ಮೆಕ್ಯಾನಿಕ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪದೇ ಪದೇ ಡಿವೋರ್ಸ್ಗಾಗಿ ತನ್ನ ಪತಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಹುಲಿಗೆಮ್ಮ ಕಳೆದ 14 ತಿಂಗಳನಿಂದ ಗಂಡನೊಂದಿಗೆ ಜಗಳವಾಡಿ ನಾರಾಯಣಪುರದ ಪತಿಯ ನಿವಾಸವನ್ನು ತೊರೆದು ಲಿಂಗಸೂಗೂರಿನ ಮನೆಯಲ್ಲಿ ವಾಸವಿದ್ದರು. ಒಟ್ಟಿಗೆ ಇರದ ಕಾರಣ ಶರಣಪ್ಪ ತನ್ನ ಪತ್ನಿ ಹುಲಿಗೆಮ್ಮಳಿಗೆ ವಿಚ್ಛೇದನ ನೀಡುವಂತೆ ಪೀಡಿಸುತ್ತಿದ್ದನಂತೆ.
ಇದಕ್ಕೊಪ್ಪದ ಕಾರಣ ತನ್ನ ಪತ್ನಿಯ ತಂದೆ ಹಾಗೂ ಮೂವರು ಸಂಬಂಧಿಕರಿಗೆ ನ್ಯಾಯ ಪಂಚಾಯಿತಿ ಮಾಡಲು ನಾರಾಯಣಪುರದ ತನ್ನ ನಿವಾಸಕ್ಕೆ ಕರೆಯಿಸಿಕೊಂಡಿದ್ದಾನೆ. ತನ್ನ ಪತ್ನಿಗೆ ವಿಚ್ಛೇದನ ಕೊಡಿಸಲು ನೀವು ಸಹಕರಿಸಿ ಎಂದು ಅವರಿಗೆ ಹೇಳಿದ್ದಾನೆ. ಇದಕ್ಕೆ ಅವರು ಒಪ್ಪದಿದ್ದಾಗ ಮನೆಯ ಹೊರಗಡೆ ಬಾಗಿಲನ್ನು ಲಾಕ್ ಮಾಡಿ ಕಿಟಕಿಯಲ್ಲಿ ಪೆಟ್ರೋಲ್ ಸುರಿದು ನಂತರ ಸಂಬಂಧಿಕರಿಗೆ ಬೆಂಕಿ ಹಚ್ಚಿ ಕಿಟಕಿಗಳನ್ನು ಹೊರಗಡೆಯಿಂದ ಲಾಕ್ ಮಾಡಿದ್ದಾನೆ.
ಸ್ವಲ್ಪ ಸಮಯದ ನಂತರ ಮನೆಯಲ್ಲಿ ಉರಿಯುತ್ತಿದ್ದ ಬೆಂಕಿಯನ್ನು ಕಂಡು ನೆರೆಯ ಗ್ರಾಮಸ್ಥರು ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದ್ದಾರೆ. ನಂತರ ವಿಪರೀತ ಗಾಯಗೊಂಡಿದ್ದ ಸಿದ್ರಾಮಪ್ಪ ಮುರಾಳ, ಮುತ್ತಪ್ಪ ಮುರಾಳ, ಶರಣಪ್ಪ ಸರೂರ, ನಾಗಪ್ಪ ಅವರನ್ನು ಲಿಂಗಸೂಗೂರಿನ ಸರ್ಕಾರಿ ಆಸ್ಪತ್ರೆ ಹಾಗೂ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ ವಿಪರೀತ ಸುಟ್ಟಗಾಯದಿಂದ ನಿನ್ನಯೇ ನಾಗಪ್ಪ ಹಾಗೂ ಶರಣಪ್ಪ ಸಾವನ್ನಪ್ಪಿದ್ದು, ಇಂದು ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಿದ್ದಪ್ಪ ಮುರಾಳ, ಮುತ್ತಪ್ಪ ಮುರಾಳ ಮೃತಪಟ್ಟಿದ್ದಾರೆ.
ಇದನ್ನೂ ಓದಿ:ವಿಚ್ಛೇದನ ಕೊಡಲು ನಿರಾಕರಣೆ.. ಯಾದಗಿರಿಯಲ್ಲಿ ಪತ್ನಿ ಕುಟುಂಬಕ್ಕೆ ಬೆಂಕಿ ಹಚ್ಚಿದ ಪತಿ, ಇಬ್ಬರು ಸಾವು