ರಾಯಚೂರು: ಒಂದೆಡೆ ಅಯೋಧ್ಯೆಯಲ್ಲಿ ಶ್ರೀರಾಮನ ಭವ್ಯ ಹಾಗೂ ಬೃಹತ್ ಮಂದಿರ ನಿರ್ಮಾಣ ಕಾಮಗಾರಿ ಭರದಿಂದ ಸಾಗಿದೆ. ಈ ನಡುವೆ ತುಂಗಭದ್ರಾ ತೀರದ ವಾಸಿಯಾಗಿರುವ ಕಲಿಯುಗ ಕಾಮಧೇನು ಭಕ್ತರ ಕಲ್ಪವೃಕ್ಷ ಶ್ರೀರಾಘವೇಂದ್ರ ಸ್ವಾಮಿಗಳು ನೆಲೆಸಿರುವ ಪುಣ್ಯಭೂಮಿಯಲ್ಲಿ ಶ್ರೀರಾಮನ ಭವ್ಯ ಪ್ರತಿಮೆ ಸ್ಥಾಪನೆಗೆ ಇಂದು ಅಡಿಗಲ್ಲು ಹಾಕಲಾಗಿದೆ. 108 ಅಡಿ ಎತ್ತರದ ಪಂಚಲೋಹ ಪ್ರತಿಮೆ ಸ್ಥಾಪನೆಗೆ ಭಾನುವಾರ ಸಂಜೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ವರ್ಚುವಲ್ ಮೂಲಕ ಶಂಕು ಸ್ಥಾಪನೆ ನೆರವೇರಿಸಿದರು. ಮಂತ್ರಾಲಯದ ರಾಯರ ಮಠದ ಸಮೀಪ ಸುಮಾರು 10 ಎಕರೆಯ ವಿಶಾಲವಾದ ಪ್ರದೇಶದಲ್ಲಿ ಆಂದಾಜು 500 ಕೋಟಿ ರೂಪಾಯಿ ವೆಚ್ಚದಲ್ಲಿ ಭವ್ಯವಾದ ಪ್ರತಿಮೆಯನ್ನು ಸ್ಥಾಪಿಸಲು ಯೋಜನೆ ರೂಪಿಸಲಾಗಿದೆ.
ಸನಾತನ ಮತ್ತು ವೈಷ್ಣವ ಪರಂಪರೆ ಬೆಳವಣಿಗೆಗೆ ಸಹಕಾರಿ: ಈ ವೇಳೆ ಮಾತನಾಡಿದ ಅಮಿತ್ ಶಾ ಅವರು "ವಿಜಯನಗರ ಸಾಮ್ರಾಜ್ಯದ ಇತಿಹಾಸ ಪರಂಪರೆಯನ್ನು ಹೊಂದಿರುವ ತುಂಗಭದ್ರಾ ನದಿ ತೀರದಲ್ಲಿ ಇಂತಹ ಬೃಹತ್ ಹಾಗೂ ಭವ್ಯ ಪ್ರತಿಮೆ ಸ್ಥಾಪನೆ ಮಾಡಲಾಗುತ್ತಿದೆ. ಸನಾತನ ಮತ್ತು ವೈಷ್ಣವ ಪರಂಪರೆ ಬೆಳವಣಿಗೆಗೆ ಇದು ಸಹಕಾರಿಯಾಗಲಿದೆ. ಶೀಘ್ರದಲ್ಲಿಯೇ ಪ್ರತಿಮೆ ಸ್ಥಾಪನೆ ಕಾರ್ಯ ಪೂರ್ಣಗೊಳ್ಳಲಿ" ಎಂದು ಶುಭ ಕೋರಿದರು. 10 ಎಕರೆ ಪ್ರದೇಶದಲ್ಲಿ 500 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿರುವ ಶ್ರೀರಾಮನ ಮೂರ್ತಿಯನ್ನು ಸ್ಥಾಪಿಸುವ ಕಾರ್ಯಕ್ಕೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಇದನ್ನೂ ಓದಿ:ಮಂತ್ರಾಲಯ ರಾಘವೇಂದ್ರ ಸ್ವಾಮಿ ಮಠದ ಹುಂಡಿ ಎಣಿಕೆ.. 36ದಿನಗಳಲ್ಲಿ ಹರಿದುಬಂತು ಹಣದ ಹೊಳೆ