ರಾಯಚೂರು: ಈಗಿನ ಯುವ ಪೀಳಿಗೆ ಕೃಷಿ ಮಾಡುವುದಕ್ಕೆ ಹಿಂದೇಟು ಹಾಕುತ್ತಾರೆ ಎನ್ನುವ ಅಪವಾದವಿದೆ. ಆದರೆ ರಾಯಚೂರಿನ ಮಾಜಿ ಸಚಿವ ಎಂ.ಎಸ್.ಪಾಟೀಲ್ರ ಮೊಮ್ಮಗ ಶರಣಬಸಪ್ಪ ಪಾಟೀಲ್ ನೈಸರ್ಗಿಕ ತರಕಾರಿ ಬೆಳೆಯನ್ನು ಬೆಳೆಯುವುದಕ್ಕೆ ಮುಂದಾಗಿದ್ದಾರೆ. ರಾಯಚೂರು ತಾಲೂಕಿನ ಏಗನೂರು ಗ್ರಾಮದ ಬಳಿ ಬರುವ ತಮ್ಮ 10 ಎಕರೆ ಜಮೀನಿನಲ್ಲಿ ಕಾಳಿದಾಸ ಫಾರ್ಮ್ ಹೌಸ್ನಲ್ಲಿರುವ ನಾಲ್ಕು ಎಕರೆ ಪ್ರದೇಶದಲ್ಲಿ ನಾನಾ ತರಕಾರಿ ಬೆಳೆಗಳನ್ನು ನೈಸರ್ಗಿಕ ಪದ್ಧತಿಯಲ್ಲಿ ವ್ಯವಸಾಯ ಮಾಡುತ್ತಿದ್ದಾರೆ.
ಇವರ ಹೊಲದಲ್ಲಿ ಹಸಿ ಮೆಣಸಿನಕಾಯಿ, ಟೊಮೆಟೊ, ಬದನೆಕಾಯಿ, ಬೆಂಡಿಕಾಯಿ ಸೇರಿದಂತೆ ನಾನಾ ತರಕಾರಿ ಬೆಳೆಯಿದೆ. ಈ ಎಲ್ಲಾ ಬೆಳೆಯನ್ನು ಜಮೀನಿನಲ್ಲಿ ರಾಸಾಯನಿಕ ಗೊಬ್ಬರ, ಕ್ರಿಮಿನಾಶಕ ಔಷಧಿಯನ್ನು ಬಳಕೆ ಮಾಡದೆ, ತಾವೇ ತಯಾರಿಸಿದ ಗೊಬ್ಬರ ಹಾಕಿ ಬೆಳೆದಿದ್ದಾರೆ. ಕೀಟಬಾಧೆಯನ್ನು ನಿಯಂತ್ರಿಸಲು ಬೆಳೆಗಳ ನಡುವೆ ಅಲಸಂದಿ, ಚೆಂಡು ಹೂವು, ಮೆಕ್ಕಜೋಳವನ್ನು ಹಾಕಲಾಗುತ್ತಿದೆ. ಇದರಿಂದ ಕೀಟಗಳು ಬೆಳೆಗಳಿಗೆ ತಗುಲುವುದಿಲ್ಲ.