ರಾಯಚೂರು: ಬಿಸಿಲೂರು ರಾಯಚೂರು ಜಿಲ್ಲೆ ಇದೀಗ ಪತ್ತೆ ಪ್ರವಾಹ ಭೀತಿ ಎದುರಿಸುತ್ತಿದೆ. ರೈತರ ಜಮೀನುಗಳಿಗೆ ನೀರು ನುಗ್ಗಿ ಬೆಳೆ ಹಾಳು ಮಾಡಿದ್ರೆ, ದೇವಾಲಯಗಳು, ಸೇತುವೆಗಳು ಜಲಾವೃತಗೊಂಡಿವೆ. ಮಹಾರಾಷ್ಟ್ರ, ಮಲೆನಾಡು ಭಾಗದಲ್ಲಿ ಧಾರಾಕಾರ ಮಳೆಯಿಂದ ನಾರಾಯಣಪುರ ಡ್ಯಾಂಗೆ ಒಳ ಹರಿವು ಹೆಚ್ಚಾಗಿದೆ. 4 ಲಕ್ಷಕ್ಕೂ ಅಧಿಕ ಕ್ಯೂಸೆಕ್ ನೀರನ್ನು ಕೃಷ್ಣಾ ನದಿಗೆ ಹರಿದು ಬಿಡಲಾಗಿದೆ. ಇದರಿಂದ ನದಿ ಪಾತ್ರದಲ್ಲಿರುವ ಗ್ರಾಮಗಳ ಜನರಿಗೆ ಪ್ರವಾಹದ ಭೀತಿ ಹೆಚ್ಚಿದೆ.
ನಾರಾಯಣಪುರ ಡ್ಯಾಂನಿಂದ ಹೊರ ಹರಿವು ಹೆಚ್ಚಳ; ರಾಯಚೂರು ಜಿಲ್ಲೆಯ ಕೃಷ್ಣಾ ನದಿತೀರದಲ್ಲಿ ಪ್ರವಾಹ ಭೀತಿ ಲಕ್ಷಾಂತರ ಕ್ಯೂಸೆಕ್ ನೀರು ಹೊರ ಹರಿವಿನಿಂದ ರಾಯಚೂರು ತಾಲೂಕಿನ ಗುರ್ಜಾಪುರ ಬ್ರಿಡ್ಜ್ ಕಂ ಬ್ಯಾರೇಜ್ ಸಂಪೂರ್ಣ ಭರ್ತಿಯಾಗಿ ಹೆಚ್ಚುವರಿ ನೀರು ಸೇತುವೆ ಮೇಲೆ ಹರಿಯುತ್ತಿದೆ. ಅಲ್ಲದೇ ಅಕ್ಕಪಕ್ಕದ ಹೊಲ ಗದ್ದೆಗಳಿಗೆ ನೀರು ನುಗ್ಗಿ ರೈತರ ಬೆಳೆ ನಷ್ಟ ಉಂಟುಮಾಡಿದೆ. ನದಿ ನೀರಿನ ಬಳಕೆಗಾಗಿ ಅಳವಡಿಸಿದ್ದ ಪಂಪ್‌ಸೆಟ್‌ಗಳು ನೀರಿನ ರಭಸಕ್ಕೆ ಕೊಚ್ಚಿ ಹೋಗಿವೆ. ಕೆಲ ಪಂಪ್‌ಸೆಟ್‌ಗಳು ನೀರೊಳಗೆ ನಿಂತು ಹಾಳಾಗಿವೆ ಎಂದು ರೈತರು ಆರೋಪಿಸಿದ್ದಾರೆ.
ಇದನ್ನೂ ಓದಿ: ನಾರಾಯಣಪುರ ಡ್ಯಾಮ್ನಿಂದ ಮೂರುವರೆ ಲಕ್ಷ ಕ್ಯೂಸೆಕ್ ನೀರು ಬಿಡುಗಡೆ : ಕೃಷ್ಣಾ ತೀರದಲ್ಲಿ ಪ್ರವಾಹ ಭೀತಿ
ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿರುವ ಪರಿಣಾಮ ಬೆಳೆ ಹಾಳಾಗಿದೆ. ಬಳಿಕ ಗ್ರಾಮದೊಳಕ್ಕೆ ಪ್ರವಾಹದ ನೀರು ಬರುವ ಆತಂಕ ಎದುರಾಗಿದೆ. ಜಿಲ್ಲೆಯ ಲಿಂಗಸೂಗೂರು, ದೇವದುರ್ಗ, ರಾಯಚೂರು ತಾಲೂಕಿನ ವ್ಯಾಪ್ತಿಯಲ್ಲಿರುವ ಕೃಷ್ಣ ನದಿ ಪಾತ್ರಕ್ಕೆ ಒಟ್ಟು 72 ಗ್ರಾಮಗಳು ಬರುತ್ತವೆ. ಸಾವಿರಾರು ಜನರು ವಾಸ ಮಾಡುತ್ತಿದ್ದಾರೆ. ಇನ್ನು ಪ್ರವಾಹ ಭೀತಿ ಹಿನ್ನೆಲೆಯಲ್ಲಿ ಜಿಲ್ಲಾಡಳಿತದಿಂದ ಅಗತ್ಯ ಕ್ರಮ ಕೈಗೊಳ್ಳಲಾಗಿದ್ದು, ನದಿ ದಂಡೆಯಲ್ಲಿ ಅಳವಡಿಸಿರುವ ಪಂಪ್‌ಸೆಟ್‌ಗಳನ್ನ ತೆಗೆಯುವಂತೆ ರೈತರಿಗೆ ಸೂಚಿಸಲಾಗಿದೆ.
ಜಾನುವಾರುಗಳನ್ನು ನದಿಗೆ ಬಿಡದಂತೆ ಸೂಚನೆ ನೀಡಿ ನದಿ ಪಾತ್ರದ ವಾಸಿಸುವ ಜನರಿಗೆ, ನಡುಗಡ್ಡೆ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಎಚ್ಚರಿಕೆ ನೀಡಲಾಗಿದೆ. ಜಿಲ್ಲೆಗೆ ಎದುರಾಗುವ ಪ್ರವಾಹವನ್ನು ನಿಭಾಯಿಸುವುದಕ್ಕೆ ಅಗತ್ಯ ಸಿಬ್ಬಂದಿಯನ್ನೂ ನಿಯೋಜನೆ ಮಾಡಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.