ರಾಯಚೂರು: ಮಹಾರಾಷ್ಟ್ರದಲ್ಲಿ ಭಾರೀ ಮಳೆ ಹಿನ್ನೆಲೆ ಜಿಲ್ಲೆಯ ಜನರಿಗೆ ಕೃಷ್ಣಾ ನದಿಯಿಂದ ಮತ್ತೊಮ್ಮೆ ಪ್ರವಾಹ ಭೀತಿ ಶುರುವಾಗಿದೆ. ಪ್ರತೀ ಬಾರಿಯೂ ಮಹಾರಾಷ್ಟ್ರದಲ್ಲಿ ಮಳೆಯಾದರೆ ಕೃಷ್ಣಾ ನದಿ ತುಂಬಿ ಹರಿದು ಪ್ರವಾಹ ಪರಿಸ್ಥಿತಿ ಉಂಟಾಗುತ್ತದೆ.
ಈ ಹಿಂದೆ ಜನರು ಪ್ರವಾಹದಿಂದ ಸಾಕಷ್ಟು ಸಂಕಷ್ಟ ಅನುಭವಿಸಿದ್ದಾರೆ. ಇದೀಗ ಮಹಾರಾಷ್ಟ್ರದಲ್ಲಿ ವರುಣನ ಆರ್ಭಟ ಶುರುವಾಗಿರುವುದರಿಂದ ಜಿಲ್ಲೆಯ ಜನರಿಗೆ ಪ್ರವಾಹ ಪರಿಸ್ಥಿತಿ ಎದುರಾಗುವ ಸಾಧ್ಯತೆಯಿದೆ. ಪ್ರವಾಹ ಬಂದರೆ ಸಾವು-ನೋವು ತಪ್ಪಿಸಲು ಜಿಲ್ಲಾಡಳಿತ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ನದಿ ತೀರದ ಗ್ರಾಮ ಪಂಚಾಯತ್ಗಳ ಪಿಡಿಒಗಳು ಮತ್ತು ಜನಪ್ರತಿನಿಧಿಗಳ ಸಭೆ ನಡೆಸಿದ ಜಿಲ್ಲಾಧಿಕಾರಿ ಕೃಷ್ಣಾ, ತುಂಗಭದ್ರಾ ಹಾಗೂ ಭೀಮಾ ನದಿಗಳಿಂದ ಪ್ರವಾಹ ಉಂಟಾಗುವ 34 ಗ್ರಾಮ ಪಂಚಾಯತ್ಗಳ 105 ಗ್ರಾಮಗಳನ್ನು ಗುರುತಿಸಿದ್ದಾರೆ.
ಈ ಗ್ರಾಮಗಳಲ್ಲಿನ ಜನ ಹಾಗೂ ಜಾನುವಾರುಗಳ ಜೀವ ರಕ್ಷಿಸಲು, ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲು ನೆರವು ನೀಡಲು ಗ್ರಾಮ ಮಟ್ಟದಲ್ಲಿ ಟಾಸ್ಕ್ ಫೋರ್ಸ್ ಸಮಿತಿ ರಚಿಸಲಾಗಿದೆ. ಸಮಿತಿಯಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಸೇರಿದಂತೆ ನಾಲ್ಕು ಸದಸ್ಯರು ಇರಲಿದ್ದಾರೆ.
ಲಿಂಗಸೂಗೂರು ತಾಲೂಕಿನಲ್ಲಿ ಮ್ಯಾದರಗಡ್ಡೆ, ರಾಯಚೂರು ಗ್ರಾಮಾಂತರ ಪ್ರದೇಶದ ಗುರ್ಜಾಪೂರು, ಅತ್ತೂರು, ಡೊಂಗರಾಂಪೂರು, ಬೂರ್ದಿಪಾಡು, ಕಲವಲದೊಡ್ಡಿ, ಕರವಕುಲ ಗ್ರಾಮಗಳಲ್ಲಿ ಜನರು ತೆಪ್ಪದ ಮೂಲಕ ನದಿ ದಾಟಿ ತಮ್ಮ ಕೆಲಸ ಕಾರ್ಯಗಳಿಗೆ ತೆರಳುತ್ತಾರೆ. ಕೃಷ್ಣಾ ಮತ್ತು ತುಂಗಭದ್ರ ನದಿಗಳಲ್ಲಿ ಒಳಹರಿವು ಹೆಚ್ಚಾದಾಗ ಯಾವುದೇ ಕಾರಣಕ್ಕೂ ಈ ಪ್ರದೇಶಗಳಲ್ಲಿ ಜನರು ನದಿ ದಾಟದಂತೆ ಕಟ್ಟುನಿಟ್ಟಾಗಿ ಸೂಚಿಸಬೇಕು.
ಪ್ರವಾಹಕ್ಕೆ ಒಳಗಾಗುವ ಗ್ರಾಮಗಳ ಜನರು ಹಾಗೂ ನಡುಗಡ್ಡೆಗಳಲ್ಲಿ ವಾಸ ಮಾಡುತ್ತಿರುವವರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವ ಮುನ್ನ ಅಧಿಕಾರಿಗಳು ವಿಶಾಲವಾದ ಸಮುದಾಯ ಭವನ, ಕಲ್ಯಾಣ ಮಂಟಪ ಅಥವಾ ಶಾಲೆಗಳನ್ನು ಗುರುತಿಸಿ, ಜನರು ವಾಸ ಮಾಡುವದಕ್ಕೆ ಯೋಗ್ಯವಾಗಿದೆಯೇ ಎನ್ನುವುದನ್ನು ಭೇಟಿ ನೀಡಿ ಪರಿಶೀಲಿಸಬೇಕು.