ರಾಯಚೂರಿನಲ್ಲಿ ಹರಿಯುವ ತುಂಗಭದ್ರಾ ನದಿ ತೀರದಲ್ಲಿ ಫ್ಲೆಮಿಂಗೋ ಪಕ್ಷಿಗಳು ಕಲರವ ರಾಯಚೂರು: ವಿದೇಶಿ ಪಕ್ಷಿಗಳು ಭಾರತದ ವಿವಿಧ ಪ್ರದೇಶಗಳಿಗೆ ಆಗಮಿಸಿ ಸಂತಾನೋತ್ಪತ್ತಿ ಮುಗಿಸಿಕೊಂಡು ವಾಪಸ್ ತೆರಳುತ್ತವೆ. ಆದರೆ ಈ ಸಲ ಕೆಲವು ಪಕ್ಷಿಗಳು ಮರಳಿ ಹೋಗದೇ ನದಿ ತೀರದಲ್ಲಿ ವಾಸವಾಗಿವೆ. ಈ ಬಾನಾಡಿಗಳು ಜನರನ್ನು ಆಕರ್ಷಿಸುತ್ತಿವೆ.
ಬಿಸಿಲೂರೆಂಬ ಖ್ಯಾತಿಯ ರಾಯಚೂರು ಜಿಲ್ಲೆಯ ತಾಪಮಾನಕ್ಕೆ ಹೆದರಿ ಕೆಲವರಂತೂ ಇಲ್ಲಿಗೆ ಬರುವುದಕ್ಕೇ ಹಿಂದೇಟು ಹಾಕುತ್ತಾರೆ. ಆದರೆ ಈ ವಿದೇಶಿ ಬಾನಾಡಿಗಳು ಮಾತ್ರ ಪ್ರತೀ ವರ್ಷ ತಪ್ಪದೆ ಜಿಲ್ಲೆಗೆ ಆಗಮಿಸಿ ತಮ್ಮ ಸಂತಾನಭಿವೃದ್ಧಿ ಮುಗಿಸಿಕೊಂಡು ಮರಳುತ್ತವೆ. ಆದರೆ ಈ ಬಾರಿ ಸಂತಾನೋತ್ಪತ್ತಿಗೆ ಬಂದ ಪಕ್ಷಿಗಳು ತಮ್ಮ ಮೂಲಸ್ಥಾನವನ್ನೇ ಮರೆತಿವೆಯೇನೋ ಎಂಬಂತೆ ಭಾಸವಾಗುತ್ತಿದೆ.
ಜಿಲ್ಲೆಯ ಬಲ ಭಾಗದಲ್ಲಿ ಕೃಷ್ಣಾ ಹಾಗೂ ಎಡ ಭಾಗದಲ್ಲಿ ತುಂಗಭದ್ರಾ ನದಿಗಳು ವಿಶಾಲ ಪ್ರದೇಶಗಳಲ್ಲಿ ಹರಿಯುತ್ತವೆ. ಎಡಭಾಗದಲ್ಲಿ ಹರಿಯುವ ತುಂಗಭದ್ರಾ ತೀರದಲ್ಲಿ ಪ್ರತೀ ವರ್ಷ ಸಾವಿರಾರು ವಿದೇಶಿ ಹಕ್ಕಿಗಳು ಆಗಮಿಸುತ್ತವೆ. ವರ್ಷದ ಕೊನೆಯ ತಿಂಗಳು ನವೆಂಬರ್ ಹಾಗೂ ಡಿಸೆಂಬರ್ ತಿಂಗಳಲ್ಲಿ ವಿವಿಧ ಬಗೆಯ ಬಾನಾಡಿಗಳು ಮೌಂಟ್ ಎವರೆಸ್ಟ್ ಮೇಲಿಂದ ಬಂದು ತುಂಗಭದ್ರಾ ಸೇರಿಕೊಳ್ಳುತ್ತವೆ. ಮುಖ್ಯವಾಗಿ, ಜಿಲ್ಲೆಯ ಮಾನ್ವಿ ತಾಲೂಕಿನ ದದ್ದಲ್, ಕಾತರಕಿ, ಮದ್ಲಾಪುರ, ಚಿಕಲಪರ್ವಿ ಸೇರಿದಂತೆ ನದಿ ತೀರದ ಗ್ರಾಮಗಳಲ್ಲಿ ಈ ಪಕ್ಷಿಗಳು ಕಂಡುಬರುತ್ತವೆ. ಈಗ ಇಲ್ಲಿ ನೆಲೆಸಿರುವ ಫ್ಲೆಮಿಂಗೋಗಳು ಹೆಚ್ಚು ಗುಂಪುಗೂಡುವ ಪಕ್ಷಿಗಳಾಗಿದ್ದು, ನೂರಾರು ಸಂಖ್ಯೆಯ ಹಿಂಡುಗಳಿವೆ. ಉದ್ದ, ಬಾಗಿದ ಹಾರಾಟ ರಚನೆಗಳಲ್ಲಿ ಮತ್ತು ದಡದ ಉದ್ದಕ್ಕೂ ಗುಂಪುಗಳಲ್ಲಿ ಅಲೆದಾಡುತ್ತಿರುವುದನ್ನು ಇಲ್ಲಿ ನೋಡಿ ಆನಂದಿಸಬಹುದು. ಹಾರಾಟದ ಸಮಯದಲ್ಲಿ, ಫ್ಲೆಮಿಂಗೋಗಳು ಆಕರ್ಷಕವಾಗಿ ಕಂಡುಬರುತ್ತವೆ. ಕಾಲುಗಳು ಹಾಗೂ ಕುತ್ತಿಗೆಯನ್ನು ನೇರವಾಗಿ ಚಾಚಿ, ಕಪ್ಪು ತೋಳುಗಳೊಂದಿಗೆ ಬಿಳಿ, ತೆಳು ಗುಲಾಬಿ ಬಣ್ಣದಲ್ಲಿ ಇವು ಕಂಗೊಳಿಸುತ್ತವೆ.
"ಪೂರ್ವ ಆಫ್ರಿಕಾ ವಲಯದ ಕೆಲವು ದೊಡ್ಡ ಸರೋವರಗಳಲ್ಲಿ ಬಹಳ ಸಂಖ್ಯೆಯಲ್ಲಿ ಇವುಗಳು ಕಂಡುಬರುತ್ತವೆ. ಸಂತಾನೋತ್ಪತ್ತಿ ಅವಧಿಯಲ್ಲಿ ಸೇರುವುದು ಹೆಚ್ಚು. ಇವುಗಳು ತಮ್ಮ ದೇಹದ ಮೇಲೆ ಉದ್ದನೆಯ ಕುತ್ತಿಗೆಯನ್ನು ತಿರುಚಿದ ಅಥವಾ ಸುರುಳಿಯಾಕಾರದೊಂದಿಗೆ ಇಟ್ಟು ವಿಶ್ರಾಂತ ಸ್ಥಿತಿಯಲ್ಲಿರುತ್ತವೆ. ಫ್ಲೆಮಿಂಗೋಗಳು ಸಾಮಾನ್ಯವಾಗಿ ಒಂದೇ ಕಾಲಿನ ಮೇಲೆ ನಿಂತಿರುವುದನ್ನು ಕಾಣಬಹುದು. ಈ ಅಭ್ಯಾಸಕ್ಕೆ ವಿವಿಧ ಕಾರಣಗಳನ್ನೂ ಸೂಚಿಸಲಾಗಿದೆ. ಉದಾಹರಣೆಗೆ, ದೇಹದ ಉಷ್ಣತೆಯ ನಿಯಂತ್ರಣ, ಶಕ್ತಿಯ ಸಂರಕ್ಷಣೆಗಾಗಿ ಈ ರೀತಿ ನಿಲ್ಲುತ್ತವೆ" ಎನ್ನುತ್ತಾರೆ ಪಕ್ಷಿ ವಿಜ್ಞಾನಿಗಳು.
ಹೆಚ್ಚಿನ ಫ್ಲೆಮಿಂಗೋ ಉಷ್ಣವಲಯ ಮತ್ತು ಉಪೋಷ್ಣವಲಯದ ಅಮೆರಿಕದಲ್ಲಿ ಅಟ್ಲಾಂಟಿಕ್ ಮಹಾಸಾಗರ ಮತ್ತು ಗಲ್ಫ್ ಆಫ್ ಮೆಕ್ಸಿಕೊದ ಕರಾವಳಿಯಲ್ಲಿ ದೊಡ್ಡ ವಸಾಹತುಗಳಲ್ಲಿ ಸಂತಾನೋತ್ಪತ್ತಿ ಮಾಡುತ್ತವೆ. ನವೆಂಬರ್ ಹಾಗೂ ಡಿಸೆಂಬರ್ ತಿಂಗಳಲ್ಲಿ ಆಗಮಿಸಿ ಐದಾರು ತಿಂಗಳ ಕಾಲ ನೆಲೆಸಿ, ಮರಳುತ್ತವೆ. ಆದರೆ ಈ ಬಾರಿ ಜೂನ್ ತಿಂಗಳು ಮುಗಿಯುತ್ತಾ ಬಂದರೂ ಪಕ್ಷಿಗಳು ಮರಳುತ್ತಿಲ್ಲ. ನದಿಯಲ್ಲಿ ಈ ಬಾನಾಡಿಗಳಿಗೆ ಯಥೇಚ್ಛ ಆಹಾರ, ನೀರು ಸಿಗುತ್ತಿರುವುದೇ ಇದಕ್ಕೆ ಕಾರಣ.
"ವಿದೇಶಗಳಿಂದ ಪ್ರತೀ ವರ್ಷ ಮಾನ್ವಿ ತಾಲೂಕಿನ ತುಂಗಭದ್ರಾ ನದಿತೀರದಲ್ಲಿ ಬರುವ ಕಾತರಕಿ, ದದ್ದಲ್, ಮದ್ಲಾಪುರ ಸೇರಿದಂತೆ ವಿವಿಧ ಗ್ರಾಮಗಳ ನದಿ ತೀರಗಳಿಗೆ ಈ ಪಕ್ಷಿಗಳು ಆಗಮಿಸುತ್ತವೆ. ಮಂಗೋಲಿಯಾ, ರಷ್ಯಾ, ಟಿಬೆಟ್ ಸೇರಿದಂತೆ ಆಯಾ ದೇಶಗಳಲ್ಲಿ ಉಷ್ಣಾಂಶ ಕಡಿಮೆಯಾಗುತ್ತದೆ. ಆ ಸಮಯದಲ್ಲಿ ಈ ಪಕ್ಷಿಗಳಿಗೆ ಆಹಾರ, ನೀರಿನ ಕೊರತೆ ಎದುರಾಗುತ್ತದೆ. ಆಗ ಇಲ್ಲಿನ ತುಂಗಭದ್ರಾ ನದಿಗೆ ಬಂದು ನೆಲೆಸಿ, ಸಂತಾನೋತ್ಪತ್ತಿ ಮಾಡಿಕೊಂಡು ಹೋಗುತ್ತವೆ. ಆದರೆ ಈ ಬಾರಿ ತುಂಗಭದ್ರೆಯ ತೀರದಲ್ಲಿ ಪಕ್ಷಿಗಳಿಗೆ ಆಹಾರ, ನೀರು ದೊರೆಯುತ್ತಿದ್ದು ವಿದೇಶಿ ಹಕ್ಕಿಗಳು ಇನ್ನೂ ಇಲ್ಲೇ ವಾಸಿಸುತ್ತಿವೆ. ನೋಡಲು ಆಕರ್ಷಕವಾಗಿವೆ. ನೋಡುಗರಿಗೂ ಖುಷಿ ಎನಿಸುತ್ತದೆ" ಎನ್ನುತ್ತಾರೆ ಪಕ್ಷಿಪ್ರೇಮಿ ಸಲ್ಲಾವುದ್ದೀನ್.
ಇದನ್ನೂ ಓದಿ:ಹೈಗಮ್ ರಖ್ ಜೌಗು ಪ್ರದೇಶಕ್ಕೆ ಆಗಮಿಸುತ್ತಿರುವ ವಲಸೆ ಪಕ್ಷಿಗಳು