ರಾಯಚೂರು:ಜಿಲ್ಲೆಯ ಮಸ್ಕಿ ಕ್ಷೇತ್ರದ ಅನರ್ಹ ಶಾಸಕ ಪ್ರತಾಪಗೌಡ ಪಾಟೀಲ್ ಹಿಂಬಾಲಕ ಮುಖಂಡರ ದೌರ್ಜನ್ಯದ ಮಾತುಗಳಿಂದ ಕೆರಳಿದ ಕಾರ್ಯಕರ್ತರು ವಾಗ್ವಾದ ನಡೆಸಿದ ಘಟನೆ ಮಟ್ಟೂರು ತಾಂಡಾದಲ್ಲಿ ನಡೆದಿದೆ.
ಮಟ್ಟೂರಲ್ಲಿ ಪ್ರಾಥಮಿಕ ಶಾಲಾ ಕೊಠಡಿ ಉದ್ಘಾಟನೆ ನಂತರ ಮುದಗಲ್ ಕ್ರಾಸ್ನಿಂದ ದ್ಯಾಮಣ್ಣ ಗೊಲ್ಲರಹಟ್ಟಿಗೆ ಸಂಪರ್ಕ ರಸ್ತೆ ಕಾಮಗಾರಿಗೆ ಪೂಜೆ ಸಲ್ಲಿಸಲು ತೆರಳಿದಾಗ ಕಾಮಗಾರಿ ಸ್ಥಳೀಯರಿಗೆ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಚರ್ಚೆ ಕೈ -ಕೈ ಮಿಲಾಯಿಸುವ ಹಂತಕ್ಕೆ ತಿರುಗಿದ್ದು ಕಂಡು ಬಂತು.
ಹಿಂಬಾಲಕರ ವರ್ತನೆಗೆ ಸಿಡಿದೆದ್ದ ಕಾರ್ಯಕರ್ತರು ಮಾಜಿ ಶಾಸಕರ ಹಿಂದಿರುವ ಪ್ರಥಮ ಹಂತದ ಮುಖಂಡರೇ ಎಲ್ಲ ಕೆಲಸ ಮಾಡುತ್ತಾ ಬಂದಿದ್ದಾರೆ. ತಾಂಡಾದ ಕಾರ್ಯಕರ್ತರು ಮೂರು ಅವಧಿ ನಿಮ್ಮ ಪರ ಕೆಲಸ ಮಾಡಿ ಹಾಳಾಗಿದ್ದೇವೆ. 1.74 ಲಕ್ಷ ರೂ. ಮೊತ್ತದ ಕೆಲಸ ನಾವೇ ಮಾಡುವುದಾಗಿ ವಾಗ್ವಾದ ನಡೆಸಿದರು. ಈ ವೇಳೆ, ಕೆಲ ಸಮಯ ಗೊಂದಲದ ವಾತಾವರಣ ನಿರ್ಮಾಣಗೊಂಡಿತ್ತು.
ಮುಖಂಡರ ಏರು ಧ್ವನಿಯ ದೌರ್ಜನ್ಯದ ಮಾತುಗಳಿಂದ ಕೆರಳಿದ ತಾಂಡಾದ ಜನತೆ ಒಗ್ಗಟ್ಟು ಪ್ರದರ್ಶಿಸಿ ಈ ಮಾತಿಗೆ ಚುನಾವಣೆ ಬಂದಾಗ ಉತ್ತರಿಸುತ್ತೇವೆ. ಮತ ಹಾಕೋರು ನಾವು, ಹಣ ಮಾಡೋರು ಅವರು ಇದು ಯಾವ ನ್ಯಾಯ ಎಂದು ಪ್ರತಾಪಗೌಡರಿಗೆ ಸವಾಲು ಹಾಕಿದ್ದು, ಭಾರಿ ಚರ್ಚೆಗೆ ದಾರಿ ಮಾಡಿಕೊಟ್ಟಿತು.
ಈಗ ಚರ್ಚೆ ಬೇಡ. ಎಲ್ಲರೂ ಕಚೇರಿಗೆ ಬನ್ನಿ ಕುಳಿತು ಮಾತನಾಡೋಣ. ವಾಗ್ವಾದದಿಂದ ಪ್ರಯೋಜನವಿಲ್ಲ. ಪರಸ್ಪರ ಸಹಕರಿಸಿ ಕೆಲಸ ಮಾಡೋಣ ಎಂದು ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಸಮಾಧಾನ ಪಡಿಸಿ ಅಲ್ಲಿಂದ ವಾಪಸ್ ಆದರು.