ರಾಯಚೂರು: ಬಿಜೆಪಿ ಸರ್ಕಾರದ ಭೂ ಕಾಯ್ದೆ ತಿದ್ದುಪಡಿಯ ಸುಗ್ರೀವಾಜ್ಞೆ ಹಾಗೂ ಕೇಂದ್ರದ ರೈತ ವಿರೋಧಿ ಕಾಯ್ದೆಗಳನ್ನು ವಾಪಸು ಪಡೆಯಬೇಕೆಂದು ಆಗ್ರಹಿಸಿ ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ ವತಿಯಿಂದ ನಗರದ ಹೊರವಲಯದ ಅಸ್ಕಿಹಾಳ ಬೈಪಾಸ್ ಬಳಿ ರಸ್ತೆ ತಡೆದು ಪ್ರತಿಭಟನೆ ನಡೆಸಲಾಯಿತು.
ರೈತ ವಿರೋಧಿ ಕಾಯ್ದೆ ಖಂಡಿಸಿ ರಾಯಚೂರಿನಲ್ಲಿ ರಸ್ತೆ ತಡೆದು ಪ್ರತಿಭಟನೆ
ಕೇಂದ್ರ ಹಾಗೂ ರಾಜ್ಯ ಸರ್ಕಾರದ ರೈತ ವಿರೋಧಿ ಕಾಯ್ದೆಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ರಾಯಚೂರು ಹೊರವಲಯದಲ್ಲಿ ರಸ್ತೆ ತಡೆ ನಡೆಸಿ ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ ಪ್ರತಿಭಟನೆ ನಡೆಸಿತು.
ಕಾನೂನು ಬಾಹಿರವಾಗಿರುವ ಭೂ ತಿದ್ದುಪಡಿ ಕಾಯ್ದೆಯ ಸುಗ್ರೀವಾಜ್ಞೆ ಪ್ರತಿಗಳನ್ನು ಸುಟ್ಟು ಹಾಕುವ ಮೂಲಕ ಅಕ್ರೋಶ ವ್ಯಕ್ತಪಡಿಸಿದ ರೈತರು, ಪ್ರಜಾಪ್ರಭುತ್ವ ಮೌಲ್ಯಗಳನ್ನು ಸರ್ಕಾರ ಗಾಳಿಗೆ ತೂರಿದೆ. ಜನತೆಯ ವಿರೋಧವನ್ನೂ ಸಹ ಲೆಕ್ಕಿಸದೆ ಕಾರ್ಪೋರೇಟ್ ಕಂಪನಿಗಳಿಗೆ ಕೃಷಿ ಭೂಮಿಯನ್ನು ನೀಡಿ ಸುಗ್ರೀವಾಜ್ಞೆ ಹೊರಡಿಸಿದೆ. ಕೊರೊನಾ ಸಂದರ್ಭದಲ್ಲಿ ರೈತರು, ಕೃಷಿ-ಕೂಲಿಕಾರರ ಸಂಕಷ್ಟಗಳಿಗೆ ಸ್ಪಂದಿಸದೇ, ಕೃಷಿ ಉತ್ಪಾದನೆ, ಕೃಷಿ ಮಾರುಕಟ್ಟೆ, ಚಿಲ್ಲರೆ ವ್ಯಾಪಾರ, ವಿದ್ಯುತ್ ಕ್ಷೇತ್ರವನ್ನು ಕಾರ್ಪೋರೇಟ್ ಕಂಪನಿಗಳಿಗೆ ನೀಡಲು ಮುಂದಾಗಿದೆ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.