ರಾಯಚೂರು:ತುಂಗಭದ್ರಾ ಎಡದಂಡೆ ಕಾಲುವೆ ಕೆಳಭಾಗದ ರೈತರಿಗೆ ನೀರು ಹರಿಸುವಂತೆ ಆಗ್ರಹಿಸಿ ಸಿರವಾರ ಪಟ್ಟಣದ ಕೆಳಭಾಗದ ರೈತರು ಬೃಹತ್ ಪ್ರತಿಭಟನೆ ನಡೆಸಿದ್ದಾರೆ.
ಪಟ್ಟಣದ ನೀರಾವರಿ ಇಲಾಖೆ ಕಚೇರಿಯ ಮುಂಭಾಗದ ರೈತರು ಹಾಗೂ ರಾಜಕೀಯ ಮುಖಂಡರು ಪಕ್ಷಾತೀತವಾಗಿ ಪ್ರತಿಭಟನೆಯಲ್ಲಿ ಭಾಗವಹಿಸುವ ಮೂಲಕ ಪ್ರತಿಭಟನೆಗೆ ಬೆಂಬಲ ನೀಡಿದ್ದಾರೆ.
ತುಂಗಭದ್ರಾ ಸಲಹಾ ಸಮಿತಿ ಸಭೆಯಲ್ಲಿ 84ರಿಂದ 92 ಡಿಸ್ಟ್ರಬ್ಯೂಟರ್ನಿಂದ ನಾಲ್ಕು ಅಡಿ ತೀರ್ಮಾನದಂತೆ ಕಾಲುವೆಗೆ ಮಾ. 31ರವರೆಗೆ ನೀರು ಹರಿಸಬೇಕು. ಆದ್ರೆ ನೀರಾವರಿ ಇಲಾಖೆ ಅಧಿಕಾರಿಗಳ ಬೇಜಾವಾಬ್ದಾರಿ ಪರಿಣಾಮ ಕೆಳಭಾಗದ ರೈತರಿಗೆ ನೀರು ದೊರೆಯುತ್ತಿಲ್ಲ. ಪರಿಣಾಮ ನಾಲೆ ನೀರನ್ನೇ ನೆಚ್ಚಿಕೊಂಡು ಬೆಳೆ ಬೆಳೆದ ರೈತರ ಬೆಳೆ ಒಣಗುವ ಮೂಲಕ ರೈತರು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ. ಈ ಕೂಡಲೇ ನೀರಾವರಿ ಇಲಾಖೆ ಅಧಿಕಾರಿಗಳು ಕೆಳಭಾಗದ ರೈತರಿಗೆ ನಿಗದಿತ ಪ್ರಮಾಣದಲ್ಲಿ ನೀರು ಹರಿಸಬೇಕು. ಇಲ್ಲದಿದ್ದರೆ ಹೋರಾಟ ತೀವ್ರಗೊಳಿಸುವುದಾಗಿ ಪ್ರತಿಭಟನಾನಿರತ ರೈತರು ಎಚ್ಚರಿಕೆ ನೀಡಿದ್ದಾರೆ.
ತುಂಗಭದ್ರಾ ಎಡದಂಡೆಯ ಮೇಲ್ಭಾಗದ ರೈತರಿಂದ ಅಕ್ರಮ ನೀರಾವರಿ ಹಾಗೂ ಒತ್ತಡ ಪರಿಣಾಮದಿಂದ ಕೆಳಭಾಗದ ರೈತರು ಪ್ರತಿ ವರ್ಷ ತೊಂದರೆ ಅನುಭವಿಸುವಂತೆ ಆಗಿದೆ. ಈ ವರ್ಷವೂ ಇದೇ ಸಮಸ್ಯೆ ತೆಲೆದೋರಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಟ್ಟಣದಲ್ಲಿ ರಸಗೊಬ್ಬರ, ರಾಸಾಯಿನಿಕ ಅಂಗಡಿ ಮಾಲೀಕರು ಅಂಗಡಿಗಳನ್ನ ಬಂದ್ ಮಾಡುವ ಮೂಲಕ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.