ರಾಯಚೂರು: ಅನಾರೋಗ್ಯದಿಂದ ಬಳಲುತ್ತಿದ್ದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಜಾನಪದ ಕಲಾವಿದ ದಾದಾಪೀರ್ ಮರ್ಜಲಾ ಅವರಿಗೆ ಖ್ಯಾತ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಸಹಾಯ ಮಾಡಿದ್ದಾರೆ.
ಜಾನಪದ ಕಲಾವಿದನ ನೆರವಿಗೆ ಬಂದ ಖ್ಯಾತ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಆರೋಗ್ಯದಲ್ಲಿ ತೊಂದರೆ ಕಾಣಿಸಿಕೊಂಡು ದಾದಾಪೀರ್ ಮರ್ಜಲಾ ಆಸ್ಪತ್ರೆಗೆ ತೆರಳಿದಾಗ ವೈದ್ಯರು ಶಸ್ತ್ರಚಿಕಿತ್ಸೆ ಮಾಡಿಸಬೇಕೆಂದು ಸೂಚಿಸಿದ್ದರು. ಆದರೆ ದಾದಾಪೀರ್ ಮರ್ಜಲಾ ಬಳಿ ಶಸ್ತ್ರಚಿಕಿತ್ಸೆಗೆ ಹಣವಿಲ್ಲದ ಕಾರಣ ಸಹಾಯ ಕೋರಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು. ಈ ಮೂಲಕ ತಮ್ಮ ನೆರವಿಗೆ ಬರುವಂತೆ ಸಹೃದಯರಲ್ಲಿ ಮನವಿ ಮಾಡಿದ್ದರು.
ಕಲಾವಿದನ ಮನವಿಗೆ ಶಾಸಕ ಡಾ.ಶಿವರಾಜ್ ಪಾಟೀಲ್ ಸ್ಪಂದಿಸಿದ್ದರು. ಇದರ ಫಲವಾಗಿ ಒಂದು ಹಂತದ ಶಸ್ತ್ರಚಿಕಿತ್ಸೆ ಮುಗಿದಿತ್ತು. ಆದರೂ ಇವರ ಆರೋಗ್ಯ ಸಂಪೂರ್ಣವಾಗಿ ಗುಣಮುಖವಾಗಿರಲಿಲ್ಲ.
ಈ ನಡುವೆ ದಾದಾಪೀರ್ ಮರ್ಜಲಾರ ಅನಾರೋಗ್ಯ ಸಮಸ್ಯೆ ಕೇಳಿದ ಹಿರಿಯ ಗಾಯಕ ಎಸ್.ಪಿ ಬಾಲಸುಬ್ರಹ್ಮಣ್ಯಂ, ಗೃಹೋಪಯೋಗಿ ವಸ್ತುಗಳನ್ನು ನೀಡಿ ಸಹಾಯ ಮಾಡಿದ್ದಾರೆ.
ಈ ಬಗ್ಗೆ ಮಾತನಾಡಿರುವ ದಾದಾಪೀರ್, ನಾನು ಬಾಲಸುಬ್ರಹ್ಮಣ್ಯಂ ಅವರೊಟ್ಟಿಗೆ ಕೆಲಸ ಮಾಡಿದ್ದೇನೆ. ಅವರ ನೆನಪಿನ ಶಕ್ತಿ ಆಗಾಧವಾಗಿದ್ದು, ನನ್ನ ಸಂಕಷ್ಟ ಕೇಳಿ ಸಹಾಯ ಮಾಡಿದ್ದಾರೆ. ಅವರಿಗೆ ನಾನು ಆಭಾರಿ ಎಂದು ಕೃತಜ್ಞತೆ ತಿಳಿಸಿದ್ದಾರೆ.