ರಾಯಚೂರು: ನಗರದ ವಾರ್ಡ್ ನಂ 31ರ ನಗರಸಭೆ ಸದಸ್ಯೆ ರೇಣಮ್ಮ ಅವರು ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಜಾತಿ ಪರಿಶೀಲನಾ ಸಭೆಯ ಆದೇಶದಂತೆ ಸಮಾಜ ಕಲ್ಯಾಣ ಇಲಾಖೆಯು ಜಾತಿ ಪ್ರಮಾಣ ಪತ್ರ ರದ್ದತಿಗೆ ಮುಂದಾಗಿದೆ.
ವಾರ್ಡ್ ನಂ 31ರ ನಗರಸಭೆ ಸದಸ್ಯೆ ರೇಣಮ್ಮ ಅವರು ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದಿದ್ದಾರೆ ಎಂದು ಆರೋಪಿಸಿ ರವೀಂದ್ರನಾಥ್ ಪಟ್ಟಿ ಅವರು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯಕ್ಕೆ ದೂರು ದಾಖಲಿಸಿದ್ದರು. ಈ ಹಿನ್ನೆಲೆ ಪರಿಶೀಲನೆ ನಡೆಸಿದ ಜಾರಿ ನಿರ್ದೇಶನಾಲಯವು, ರೇಣಮ್ಮ ಅವರು ಪಡೆದ ಜಾತಿ ಪ್ರಮಾಣ ಪತ್ರ ಸುಳ್ಳಾಗಿದೆ ಎಂದು 30-12-2018 ರಂದು ಜಿಲ್ಲಾಧಿಕಾರಿಗಳಿಗೆ ವರದಿಯನ್ನು ಸಲ್ಲಿಸಿತ್ತು.
ಜಿಲ್ಲಾಧಿಕಾರಿಗಳು ಸುಮಾರು 18 ಸಲ ವಿಚಾರಣೆ ನಡೆಸಿ ಜಿಲ್ಲಾ ಸಹಾಯಕ ಆಯುಕ್ತರ ನೇತೃತ್ವದ ಸಬ್ ಕಮಿಟಿ ರಚಸಿ ತನಿಖೆಗೆ ಸೂಚಿಸಿದ ಹಿನ್ನೆಲೆ, ಸಬ್ ಕಮಿಟಿ ರೇಣಮ್ಮ ಅವರ ಊರು ಹಾಗೂ ವಾಸ ಸ್ಥಳ ಪರಿಶೀಲನೆ ನಡೆಸಿ ಸತ್ಯಾಸತ್ಯತೆ ಪರಿಶೀಲನೆ ಮಾಡಿದ ಹಿನ್ನೆಲೆ ಸಮಾಜ ಕಲ್ಯಾಣ ಇಲಾಖೆ ಇವರ ಜಾತಿ ಪ್ರಮಾಣ ಪತ್ರ ರದ್ದತಿಗೆ ತಹಶೀಲದ್ದಾರ್ರಿಗೆ ಸೂಚಿಸಿದೆ.
ದೂರುದಾರ ರವೀಂದ್ರನಾಥ ಪಟ್ಟಿ ಮಾತನಾಡಿ, ರೇಣಮ್ಮ ಅವರು ಕಳೆದ ನಗರಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಸಮಯದಲ್ಲಿ ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದಿರುವ ಕುರಿತು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯಕ್ಕೆ ದೂರು ಸಲ್ಲಿಸಿದ್ದರು. ನಂತರ ಜಿಲ್ಲಾಧಿಕಾರಿಗಳು 18 ಸಲ ವಿಚಾರಣೆ ನಡೆಸಿ ರೇಣಮ್ಮ ಅವರು ಪಡೆದ ಜಾತಿ ಪ್ರಮಾಣ ಪತ್ರ ಸುಳ್ಳು ಎಂದು ಸಾಬೀತಾದ ಹಿನ್ನೆಲೆ ಅವರ ಪ್ರಮಾಣ ಪತ್ರ ರದ್ದತಿಗೆ ಜಿಲ್ಲಾಧಿಕಾರಿಗಳು ಆದೇಶ ನೀಡಿದ್ದಾರೆ ಎಂದರು.