ರಾಯಚೂರು :ಪರಿಶಿಷ್ಟ ಜಾತಿ ಪಟ್ಟಿಯಿಂದ ಸ್ಪೃಶ್ಯ ಜಾತಿಗಳನ್ನು ಕೈಬಿಡುವಂತೆ ಒತ್ತಾಯಿಸಿ ಕರ್ನಾಟಕ ಅಸ್ಪೃಶ್ಯ ಸಮುದಾಯಗಳ ಮಹಾಸಭಾ ಪ್ರತಿಭಟನೆ ನಡೆಸಿತು.
ಲಿಂಗಸುಗೂರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನೆ ನಡೆಸಿದ ಸಂಘಟಕರು, ಅನಧಿಕೃತವಾಗಿ ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಬಂಜಾರ, ಭೋವಿ, ಕೊರಮ, ಕೊರಚ ಜಾತಿಗಳು ಮುಂದುವರೆದಿದ್ದು ಅಸ್ಪೃಶ್ಯ ಜಾತಿಗಳಿಗೆ ಅನ್ಯಾಯವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು
1959 ರಲ್ಲಿ ಮೈಸೂರು ಸಂಸ್ಥಾನಿಕರು ಬಂಜಾರ, ಭೋವಿ, ಕೊರಮ, ಕೊರಚ ಜಾತಿ ಜಾತಿಗಳನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಸೇರ್ಪಡೆ ಮಾಡಲು ಶಿಫಾರಸ್ಸು ಮಾಡಿದ್ದರು. ನಂತರ ರಾಷ್ಟ್ರಪತಿ ಅಂಕಿತ ಸಮೇತ ಸಂಸತ್ತಿನಲ್ಲಿ ಚರ್ಚೆಗೆ ಬಂದಾಗ ಅಂಗೀಕಾರ ಆಗಲಿಲ್ಲ. ಆದರೂ ಕೂಡ ಮೀಸಲಾತಿ ಸೌಲಭ್ಯ ಮುಂದುವರೆಸಿದ್ದು ತಮ್ಮ ಸಮುದಾಯಕ್ಕೆ ಸಂಕಷ್ಟ ತಂದೊಡ್ಡಿದೆ ಎಂದು ದೂರಿದರು.
ಈ ಕುರಿತು ಸರ್ವೋಚ್ಚ ನ್ಯಾಯಾಲಯಕ್ಕೆ ರಿಟ್ ಅರ್ಜಿ ಸಲ್ಲಿಸಿದಾಗ ರಾಷ್ಟ್ರೀಯ ಪರಿಶಿಷ್ಟ ಆಯೋಗಕ್ಕೆ ಅಹವಾಲು ಸಲ್ಲಿಸಲು ಸೂಚಿಸಿದೆ. ಆಯೋಗ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದು ಸಾಂವಿಧಾನಿಕ ಹೋರಾಟಕ್ಕೆ ರಾಜ್ಯ ಸರ್ಕಾರ ಮನ್ನಣೆ ನೀಡಬೇಕು ಎಂದು ಒತ್ತಾಯಿಸಿದರು.
ಪರಿಶಿಷ್ಟ ಜಾತಿಯ ಶೇ 15 ರಷ್ಟು ಮೀಸಲಾತಿಯಲ್ಲಿ ಅಸ್ಪೃಶ್ಯ ಜಾತಿ ಜನತೆ ಶೇ 50 ರಷ್ಟು ನಷ್ಟ ಅನುಭವಿಸುವಂತಾಗಿದೆ. ಕಾರಣ ರಾಜ್ಯ ಸರ್ಕಾರ ಮಹಾಸಭಾದ ಬೇಡಿಕೆ ಪುರಸ್ಕರಿಸಿ ನ್ಯಾಯ ಒದಗಿಸಬೇಕು ಎಂದು ಕೋರಿದರು.