ರಾಯಚೂರು :ಮದ್ಯ ಸೇವನೆ ಮಾಡಿದ್ದ ಮೂವರು ವ್ಯಕ್ತಿಗಳು ಬಾರ್ ಮಾಲೀಕನ ಮೇಲೆ ಹಲ್ಲೆ ಮಾಡಿರುವ ಘಟನೆ ರಾಯಚೂರು ಜಿಲ್ಲೆಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಜಿಲ್ಲೆಯ ದೇವದುರ್ಗ ಪಟ್ಟಣದ ಜಾಲಹಳ್ಳಿ ರಸ್ತೆಯಲ್ಲಿರುವ ಕ್ಷೀರಸಾಗರ ಬಾರ್ ಅಂಡ್ ರೆಸ್ಟೋರೆಂಟ್ ಮಾಲೀಕ ರವೀಂದ್ರ ಅಕ್ಕರಕಿ ಎಂಬುವರ ಮೇಲೆ ಹಲ್ಲೆ ನಡೆಸಿದ್ದಾರೆ. ಅಂಜಳ ಗ್ರಾಮದ ಮೂವರು ಮದ್ಯ ಸೇವನೆ ಮಾಡಿ ಬಾರ್ ಮುಂಭಾಗದಲ್ಲಿ ಮದ್ಯ ನೀಡುವಂತೆ ಸತಾಯಿಸಿದ್ದಾರೆ.
ಆದರೆ, ಬಾರ್ ಪರವಾನಗಿ ಸಿಎಲ್-7 ಹೊಂದಿದ್ದು, ಸರ್ಕಾರ ಬಾರ್ ತೆರೆಯಲು ಅನುಮತಿ ನೀಡಿಲ್ಲ ಎಂದು ಮಾಲೀಕ ಹೇಳಿದ್ದಾನೆ. ಆದರೆ, ವಿಪರೀತವಾಗಿ ಕುಡಿದು ಬಂದಿದ್ದ ಮೂವರು ಬಾರ್ ಕಾವಲು ಕಾಯುತ್ತಿದ್ದ ಮಾಲೀಕ ರವೀಂದ್ರ ಜತೆ ಮಾತಿನ ಚಕಮಕಿ ನಡೆಸಿದ್ದಾರೆ.
ನಂತರ ಬಾರ್ ಮಾಲೀಕ ಮದ್ಯ ಮಾರಾಟ ಮಾಡಲು ಸರ್ಕಾರ ಅನುಮತಿ ನೀಡಿಲ್ಲ. ಅಬಕಾರಿ ಇಲಾಖೆ ಬಾರ್ಗೆ ಸೀಲ್ ಹಾಕಿದೆ. ಹೀಗಾಗಿ ಮದ್ಯ ಮಾರಾಟ ಮಾಡಲು ಬರುವುದಿಲ್ಲ ಎಂದು ಎಷ್ಟೇ ಹೇಳಿದರೂ ಕೇಳದೆ, ಮೂವರು ಸೇರಿ ಬಾರ್ ಮಾಲೀಕನ ಮೇಲೆ ಕಲ್ಲಿನಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ.
ಇದರಿಂದ ಬಾರ್ ಮಾಲೀಕ ತೀವ್ರವಾಗಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ಚಿಕಿತ್ಸೆಗೆಂದು ಆತನನ್ನು ದಾಖಲಿಸಲಾಗಿದೆ. ಹಲ್ಲೆ ನಡೆಸಿದ ಮೂವರ ಮೇಲೆ ದೇವದುರ್ಗ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.