ರಾಯಚೂರು:ನಗರ ಪ್ರದೇಶದಲ್ಲಿ ಭಾರಿ ಮಳೆ ಸುರಿದರೆ ಮೂರ್ನಾಲ್ಕು ಬಡಾವಣೆಗಳು ನೀರಿನಿಂದ ಜಲಾವೃತವಾಗುತ್ತವೆ. ಮಳೆ ನೀರು ಸರಾಗವಾಗಿ ಹರಿದು ಹೋಗಲು ಯೋಜನೆ ರೂಪಿಸದ ಹಾಗೂ ಅವೈಜ್ಞಾನಿಕ ಚರಂಡಿ ನಿರ್ಮಾಣ ಮತ್ತು ರಾಜಕಾಲುವೆಗಳಲ್ಲಿ ಹೂಳೆತ್ತದಿರುವುದೇ ಅದಕ್ಕೆ ಕಾರಣ. ಹಾಗೆಯೇ ನಗರಸಭೆ ನಿರ್ಲಕ್ಷ್ಯವೂ ಎದ್ದು ಕಾಣುತ್ತದೆ.
ವರುಣ ಆರ್ಭಟ ಹೆಚ್ಚಾದರೆ ಸಿಯಾತಲಾಬ್, ಜಲಾಲ್ನಗರ, ನೀರುಬಾವಿ ಕುಂಟಾ ಬಡಾವಣೆಗಳ ನಿವಾಸಿಗಳು ರಾತ್ರಿ ಜಾಗರಣೆ ಮಾಡುವ ದುಸ್ಥಿತಿ ಬರುತ್ತದೆ. ಮನೆಗೆ ನೀರು ನುಗ್ಗಿದ್ದರೆ ಆಹಾರ ಪದಾರ್ಥಗಳು, ಧಾನ್ಯಗಳು ನೀರು ಪಾಲಾಗುತ್ತವೆ. ಒಂದು ದಿನ ಮಳೆ ಸುರಿದರೆ ಈ ದುಸ್ಥಿತಿ ಎದುರಾಗುತ್ತದೆ. ಇನ್ನು ಬಿಟ್ಟೂ ಬಿಡದೆ ಸುರಿದರೆ ಜನರ ಪರಿಸ್ಥಿತಿ ದೇವರಿಗೆ ಪ್ರೀತಿ. ರಸ್ತೆಗಳ ಮೇಲೆಲ್ಲಾ ನೀರು ಹರಿದು ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಗುತ್ತದೆ.