ರಾಯಚೂರು: ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಕೊಪ್ಪಳ ಸಂಸದ ಸಂಗಣ್ಣ ಕರಡಿ ಹಾಗೂ ರಾಯಚೂರು ಸಂಸದ ರಾಜಾ ಅಮರೇಶ್ವರ ನಾಯಕ ನೇತೃತ್ವದಲ್ಲಿ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆ ನಡೆಯಿತು.
ಸಭೆಯ ಆರಂಭದಲ್ಲಿ ಜಿಲ್ಲೆಯ ಸಿಂಧನೂರು ದೇವದುರ್ಗ ಹಾಗೂ ವಿವಿಧ ತಾಲೂಕಿನ ಮುಖ್ಯರಸ್ತೆ ಕಾಮಗಾರಿ ವಿಳಂಬದ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಕೊಪ್ಪಳ ಸಂಸದ ಕರಡಿ ಸಂಗಣ್ಣ ಹಾಗೂ ರಾಯಚೂರು ಸಂಸದ ರಾಜ ಅಮರೇಶ್ವರ ನಾಯಕ್ ಅವರು, ಕಾಮಗಾರಿಗಳ ಅವಧಿಯ ಗಡುವು ಮುಗಿದರೂ ಏಕೆ ಪೂರ್ಣಗೊಳಿಸಿಲ್ಲ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ರಾಯಚೂರಿನಲ್ಲಿ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆ ಅಲ್ಲದೆ ಸಭೆಯಲ್ಲಿ ಈ ಕುರಿತು ಮಾಹಿತಿ ಹೇಳಲು ಪಿಡಬ್ಲ್ಯೂಡಿ ಹಿರಿಯ ಅಧಿಕಾರಿಗಳು ಗೈರಾಗಿದ್ದರು. ಅನ್ಯ ಕೆಲಸದ ನಿಮಿತ್ತ ಸಿಂಧನೂರಿಗೆ ತೆರಳಿದ್ದಾರೆ ಎಂದು ಕಿರಿಯ ಅಧಿಕಾರಿಗಳು ಸ್ಪಷ್ಟನೆ ನೀಡಿದಾಗ ಅಸಮಾಧಾನಗೊಂಡ ಸಂಸದರು, ಸಭೆಯ ಮಹತ್ವ ಅರಿಯದೇ ಬೇಜವಾಬ್ದಾರಿಯಿಂದ ವರ್ತಿಸಿದ್ದು, ಅವರಿಗೆ ನೋಟಿಸ್ ನೀಡುವಂತೆ ಜಿಲ್ಲಾಧಿಕಾರಿ ವೆಂಕಟೇಶ ಕುಮಾರ ಅವರಿಗೆ ಸೂಚಿಸಿದರು.
ಸಭೆಯಲ್ಲಿ ಮುನಿರಾಬಾದ್ - ಮಹೆಬೂಬ್ ನಗರ ರೈಲ್ವೆ ಲೈನ್ ನಿರ್ಮಾಣ ಕಾಮಗಾರಿ ಕುರಿತು ಮಾಹಿತಿ ಕೇಳಿದಾಗ ರೈಲ್ವೆ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರು. ವಿಧವಾ, ವೃದ್ಧಾಪ್ಯ ಸೇರಿದಂತೆ ವಿವಿಧ ಸಾಮಾಜಿಕ ಯೋಜನೆಯಡಿ ಫಲಾನುಭವಿಗಳ ಆನ್ಲೈನ್ ಪ್ರಕ್ರಿಯೆಯ ಮಂದಗತಿಯ ಜಾರಿಯ ಕುರಿತು ಅಸಮಧಾನ ವ್ಯಕ್ತ ಪಡಿಸಿದರು. ಫಲಾನುಭವಿಗಳ ಆಧಾರ್ ಜೋಡಣೆ ಮಾಡಿ ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು. ತಾಂತ್ರಿಕ ಸಮಸ್ಯೆಯ ಪರಿಹಾರಕ್ಕೆ ಮುಂದಾಗಬೇಕು ಎಂದುಉಭಯ ಸಂಸದರು ತಾಕೀತು ಮಾಡಿದರು.
ಇದರ ಜೊತೆಗೆ ಸ್ವಚ್ಛ ಭಾರತ ಯೋಜನೆ, ಕೃಷಿ ಸಿಂಚಾಯಿ ಯೋಜನೆ, ಪಿಎಂಎವೈ ಸೇರಿದಂತೆ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿದರು.