ರಾಯಚೂರು: ಅಧಿಕಾರ ವಿಕೇಂದ್ರೀಕರಣದಿಂದ ಮಾತ್ರ ಅಭಿವೃದ್ಧಿ ಸಾಧ್ಯವಾಗುತ್ತದೆ. ಸ್ಥಳೀಯ ಮಟ್ಟದ ಸಮಸ್ಯೆಗಳನ್ನು ದೂರದ ಪ್ರದೇಶಗಳಿಂದ ಅಭಿವೃದ್ಧಿ ಮಾಡಲು ಆಗುವುದಿಲ್ಲ. ಸ್ಥಳೀಯ ಮಟ್ಟದಲ್ಲಿ ಏನೇ ಸಮಸ್ಯೆಗಳು ಇರಲಿ, ಅವುಗಳಿಗೆ ತಕ್ಷಣದ ಪರಿಹಾರ ಕೊಂಡುಕೊಳ್ಳಲು ಸಾಧ್ಯವಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಹೇಳಿದರು.
ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರದ ಪಂಚಮುಖಿ ಗಾಣಧಾಳ ಗ್ರಾಮದಲ್ಲಿ ಆಯೋಜಿಸಿದ್ದ ಗ್ರಾಮ ಪಂಚಾಯಿತಿಗಳಲ್ಲಿ ಎರಡನೇ ಅವಧಿಗೆ ನೂತನವಾಗಿ ಆಯ್ಕೆಯಾದ ಅಧ್ಯಕ್ಷರು, ಉಪಾಧ್ಯಕ್ಷರಿಗೆ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು. ಅಧಿಕಾರ ವಿಕೇಂದ್ರೀಕರಣ 73/74ನೇ ತಿದ್ದುಪಡಿ ಮಾಡಿ, ಕಾಂಗ್ರೆಸ್ ಸರ್ಕಾರವು ಸರ್ಕಾರದ ಯೋಜನೆಗಳನ್ನು ಸರ್ಕಾರದ ಸಮಾಜದ ಕಟ್ಟಕಡೆಯ ಪ್ರಜೆಗೆ ಮುಟ್ಟಬೇಕೆಂದು ಅಧಿಕಾರ ವಿಕೇಂದ್ರೀಕರಣವನ್ನು ಅಂದಿನ ಪ್ರಧಾನಿ ರಾಜೀವ್ ಗಾಂಧೀಜಿ ಅವರು ಜಾರಿಗೆ ತಂದರು.
ವಿಶೇಷವಾಗಿ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ಗ್ರಾಮ ಪಂಚಾಯತ್ ಇವುಗಳಿಗೆ ಭದ್ರ ಬುನಾದಿ ಹಾಕಿದ್ದು, ಕಾಂಗ್ರೆಸ್ ಸರ್ಕಾರ. ಗ್ರಾಮ ಪಂಚಾಯಿತಿಗೆ ಹೆಚ್ಚಿನ ಶಕ್ತಿಯನ್ನು ತುಂಬುವ ಕೆಲಸ ಮಾಡುತ್ತೇವೆ. ಕಾಂಗ್ರೆಸ್ಸೇತರ ಸರ್ಕಾರ ಬಂದಾಗ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಅಷ್ಟೊಂದು ಅಭಿವೃದ್ಧಿಯಾಗಿಲ್ಲ. ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ಗಳನ್ನ ಕಾಲ ಕಾಲಕ್ಕೆ ಸರಿಯಾಗಿ ನಡೆಸದೇ ಮುಂದೂಡುತ್ತಾ ಬಂದಿತ್ತು.
ಪಂಚಾಯಿತಿಗಳಲ್ಲಿ ಮಹಿಳೆಯರಿಗೆ ಮೀಸಲಾತಿ: ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗಲೆಲ್ಲ ಸ್ಥಳೀಯ ಮಟ್ಟದ ಆಡಳಿತವನ್ನು ಬಲಪಡಿಸಲು ಶ್ರಮಿಸುತ್ತಿದೆ. ಸ್ಥಳೀಯ ಸರ್ಕಾರಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ವಿಶೇಷವಾಗಿ ಪಂಚಾಯತಿಗಳಲ್ಲಿ ಮಹಿಳೆಯರಿಗೆ ಮೀಸಲಾತಿ ತಂದಿದ್ದು, ನಮ್ಮ ಸರ್ಕಾರ ಎಂದರು.