ಡಾ.ಹನುಮಂತಗೌಡ ಆರ್.ಕಲ್ಮನಿ ಮಾತು ರಾಯಚೂರು:''ರಾಜ್ಯದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಹಾಗೂ ಹೊರಗುಳಿದ ಕಲ್ಯಾಣ ಕರ್ನಾಟಕ ಭಾಗದ ಅತಿಥಿ ಉಪನ್ಯಾಸಕರಿಗೆ ವೇತನಸಹಿತ ಹಾಜರಾತಿ ನೀಡಬೇಕು'' ಎಂದು ರಾಜ್ಯಾಧ್ಯಕ್ಷ ಡಾ.ಹನುಮಂತಗೌಡ ಆರ್.ಕಲ್ಮನಿ ಆಗ್ರಹಿಸಿದರು.
ನಗರದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ''ರಾಜ್ಯದ 430ಕ್ಕೂ ಹೆಚ್ಚಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅಂದಾಜು 11 ಸಾವಿರಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು ಹಲವು ವರ್ಷಗಳಿಂದ ಅತ್ಯಂತ ಕಡಿಮೆ ಗೌರವ ಭತ್ಯೆ ಪಡೆದು ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಪ್ರಸ್ತುತ ಸೇವೆ ಸಲ್ಲಿಸುತ್ತಿರುವ ಸಾವಿರಾರು ಅತಿಥಿ ಉಪನ್ಯಾಸಕರ ವಯೋಮಿತಿ ಮೀರಿದೆ. ಈ ಎಲ್ಲಾ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ನೀಡಬೇಕು'' ಎಂದು ಒತ್ತಾಯಿಸಿದರು.
''ವಯೋಮಿತಿ ಮೀರಿರುವ ಅತಿಥಿ ಉಪನ್ಯಾಸಕರು ವೃತ್ತಿಯಲ್ಲಿ ಪ್ರತಿಭಾವಂತರು, ಅರ್ಹರು ಮತ್ತು ಬೋಧನಾ ಕೌಶಲ ಹೊಂದಿದ್ದಾರೆ. ಇವರು ತಮ್ಮ ಸಾಮರ್ಥ್ಯಕ್ಕೆ ತಕ್ಕ ಹಾಗೆ ಶೈಕ್ಷಣಿಕ ಚಟುವಟಿಕೆಯಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗದ ಪರಿಸ್ಥಿತಿಯಲ್ಲಿ ಇದ್ದಾರೆ. ಅತ್ಯಂತ ಕಡಿಮೆ ವೇತನ, ಕೆಲಸಕ್ಕೆ ತಕ್ಕ ಸರಿಯಾಗಿ ಗೌರವಧನ ಪಾವತಿಯಾಗದಿರುವುದು, ವರ್ಷಪೂರ್ತಿ ಕೆಲಸ ಸಿಗದೇ ಇರುವುದು ಆರ್ಥಿಕವಾಗಿ, ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಆತಂಕದಲ್ಲಿಯೇ ಜೀವನ ಸಾಗಿಸುತ್ತಿದ್ದಾರೆ. ಸೇವಾ ಅಭದ್ರತೆ ಅತಿಥಿ ಉಪನ್ಯಾಸಕರಿಗೆ ಕಾಡುತ್ತಿದ್ದಾರೆ'' ಎಂದರು. ''2023 ಅ.7ರಿಂದ ಕರ್ತವ್ಯಕ್ಕೆ ನೇಮಗಾತಿಗೊಂಡ ಸರ್ಕಾರದ ಮೌಖಿಕ ಆದೇಶದಿಂದ ಹೊರಗುಳಿದ ಕಲ್ಯಾಣ ಕರ್ನಾಟಕ ಭಾಗದ ಅತಿಥಿ ಉಪನ್ಯಾಸಕರಿಗೆ ವೇತನಸಹಿತವಾಗಿ ಹಾಜರಾತಿ ನೀಡುವುದರ ಜೊತೆಯಲ್ಲಿ ಸೇವೆ ಭದ್ರತೆಯನ್ನು ಒದಗಿಸಬೇಕು'' ಎಂದು ಸರ್ಕಾರವನ್ನು ಒತ್ತಾಯಿಸಿದರು.
''ಅತಿಥಿ ಉಪನ್ಯಾಸಕರ ಕೆಲಸವನ್ನು ಕಾಯಂಗೊಳಿಸಲು ಆಗ್ರಹಿಸಿ ಸಂಘಟನೆಯಿಂದ ಈ ಹಿಂದೆ ಬೆಳಗಾವಿಯಲ್ಲಿ ಹೋರಾಟ ನಡೆಸಲಾಗಿತ್ತು. ಆ ಸಂದರ್ಭದಲ್ಲಿ ವಿಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ, ಅತಿಥಿ ಉಪನ್ಯಾಸಕರ ಪರವಾಗಿ ಸದನದಲ್ಲಿ ಧ್ವನಿ ಎತ್ತಿದರು. ಆದರೆ, ಈಗ ಅವರೇ ಮುಖ್ಯಮಂತ್ರಿಗಳು ಆಗಿದ್ದಾರೆ. ಆದರೂ ಸಹ ನಮ್ಮನ್ನು ಸೇವೆಯನ್ನು ಕಾಯಂಗೊಳಿಸಿಲ್ಲ, ಜೊತೆಗೆ ಸೇವಾ ಭದ್ರತೆಯನ್ನು ಒದಗಿಸಿಲ್ಲ. ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ರಾಜ್ಯದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕೆಲಸ ಮಾಡುತ್ತಿರುವ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಒದಗಿಸಬೇಕು, ತಮ್ಮ ಚುನಾವಣೆಯ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಯಂತೆ ಅತಿಥಿ ಉಪನ್ಯಾಸಕರನ್ನು ಶೀಘ್ರವಾಗಿ ಕಾಯಂ ಮಾಡಬೇಕು. ಬೇಡಿಕೆಗಳನ್ನು ಈಡೇರಿಸಿದ್ದರೆ, ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದಲ್ಲಿ ಅಧಿವೇಶನದಲ್ಲಿ ಪ್ರತಿಭಟನೆ ನಡೆಸಲಾಗುವುದು'' ಎಂದು ಎಚ್ಚರಿಕೆ ನೀಡಿದರು.
ಇದನ್ನೂ ಓದಿ:ಕಾಂಗ್ರೆಸ್ ಶಾಸಕರ ಖರೀದಿಗೆ ಯತ್ನಿಸಿರುವ ವಿಡಿಯೋ ದಾಖಲೆ ಇವೆ: ಶಾಸಕ ರವಿಕುಮಾರ್ ಗಣಿಗ ಸ್ಪೋಟಕ ಹೇಳಿಕೆ