ರಾಯಚೂರು: ಈ ಹಿಂದೆ ಸರ್ಕಾರ ಸಣ್ಣ ಮತ್ತು ಅತಿಸಣ್ಣ ರೈತರಿಗೆ ಎಕರೆ ಜಮೀನಿಗೆ 5 ಕೆ.ಜಿ. ತೂಕದ ಒಂದು ಪ್ಯಾಕೇಟ್ನಂತೆ ಸಬ್ಸಿಡಿ ದರದಲ್ಲಿ ಬಿತ್ತನೆ ಬೀಜಗಳನ್ನ ವಿತರಣೆ ಮಾಡುತ್ತಿತ್ತು. ಪ್ರಸಕ್ತ ಮುಂಗಾರು ಹಂಗಾಮಿಗೆ ಸಬ್ಸಿಡಿ ಬೀಜ ವಿತರಣೆಯ ತೂಕದಲ್ಲಿ ಕತ್ತರಿ ಪ್ರಯೋಗ ಮಾಡಲು ಮುಂದಾಗಿದ್ದು, ರೈತರಿಗೆ ಆತಂಕ ಎದುರಾಗಿದೆ.
ಕೃಷಿ ಇಲಾಖೆಯಿಂದ ರೈತ ಸಂಪರ್ಕ ಕೇಂದ್ರಗಳಲ್ಲಿ ಪ್ರತಿ ಎಕರೆಗೆ 5 ಕೆ.ಜಿ.ಯಂತೆ ಸುಮಾರು 25 ಕೆ.ಜಿ.ವರೆಗೆ ಬೀಜ ವಿತರಣೆ ಮಾಡಲಾಗುತ್ತಿತ್ತು. ಆದ್ರೆ, ಇದೀಗ ಎಕರೆಗೆ ಶೇ.33ರಷ್ಟು ಮಾತ್ರ ಬೀಜ ವಿತರಣೆ ಮಾಡುವುದಕ್ಕೆ ಮುಂದಾಗಿದೆಯಂತೆ. ಸರ್ಕಾರದ ಈ ನಿಯಮಕ್ಕೆ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿತ್ತನೆ ಬೀಜ ವಿತರಣೆಯಲ್ಲಿ ಕಡಿತ, ಅನ್ನದಾತರಿಗೆ ಶಾಕ್ ಎಕರೆಗೆ ಶೇ.33ರಷ್ಟು ಬಿತ್ತನೆ ಬೀಜ ವಿತರಿಸಬೇಕು ಎನ್ನುವ ನಿಯಮ ಹೊಸದೇನಲ್ಲ. ಮೊದಲಿನಿಂದಲೂ ಈ ನಿಯಮವಿದ್ರೂ ಪರಿಣಾಮಕಾರಿಯಾಗಿ ಜಾರಿಗೊಳಿಸಿರಲಿಲ್ಲ. ಆದ್ರೆ ಈ ಬಾರಿ ಸರ್ಕಾರ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಮುಂದಾಗಿದೆ. ಈ ಮೊದಲು 5 ಎಕರೆ ಜಮೀನಿಗೆ 25 ಕೆ.ಜಿ.ಯ ಪ್ಯಾಕೇಟ್ನ್ನು ರೈತರಿಗೆ ನೀಡಲಾಗುತ್ತಿತ್ತು. ಆದ್ರೆ ಇದೀಗ ಅದನ್ನು ಕಡಿತಗೊಳಿಸಲಾಗಿದೆ.
ಪ್ರಸಕ್ತ ಸಾಲಿನಲ್ಲಿ ಸರ್ಕರ ನಿಯಮವನ್ನ ಪರಿಣಾಮಕಾರಿಯಾಗಿ ಜಾರಿ ಮಾಡಬೇಕು ಎನ್ನುವ ಆದೇಶದ ಮೇರೆಗೆ ಶೇ.33ರಷ್ಟು ಮಾತ್ರ ಬಿತ್ತನೆ ಬೀಜ ವಿತರಿಸಲಾಗುತ್ತಿದೆ ಎನ್ನುತ್ತಾರೆ ಕೃಷಿ ಇಲಾಖೆಯ ಅಧಿಕಾರಿಗಳು.
ರಾಯಚೂರು ಜಿಲ್ಲೆಯಲ್ಲಿ 3,32,033 ಭೂ ಹಿಡುವಳಿದಾರರಿದ್ದರೆ, ಇದರಲ್ಲಿ 1,11,859 ಸಣ್ಣ ಮತ್ತು 1,01,422 ಅತಿ ಸಣ್ಣ ಭೂ ಹಿಡುವಳಿದಾರರಿದ್ದು, 38,690 ಕ್ವಿಂಟಾಲ್ ಬಿತ್ತನೆ ಜಿಲ್ಲೆಗೆ ಅವಶ್ಯಕತೆಯಿದೆ. ಸರ್ಕಾರದಿಂದ ಪ್ರಸ್ತುತ 8,677 ಕ್ವಿಂಟಾಲ್ ಸರಬರಾಜು ಆಗಿದೆ. ಈ ಸಂಬಂಧ ಸರ್ಕಾರದ ವಿರುದ್ಧ ಅನ್ನದಾತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.